

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಶುಕ್ರವಾರ ಬೆಳಗ್ಗೆ ಜಿಮ್ನಲ್ಲಿ ಕಸರತ್ತು ಮಾಡುವಾಗ ಕುಸಿದು ಬಿದ್ದ ಅಪ್ಪು ಅವರನ್ನ ಕೂಡಲೇ ರಮಣಶ್ರೀ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ವಿಕ್ರಂ ಆಸ್ಪತ್ರೆಗೆ ಸ್ಥಳಾಂತರಿಸಿ ತಜ್ಞವೈದ್ಯರ ತಂಡ ಅಪ್ಪು ಅವರನ್ನ ಬದುಕಿಸಲು ಹೋರಾಟ ನಡೆಸಿತ್ತಾದರೂ ಪ್ರಯೋಜನವಾಗಲಿಲ್ಲ. ಪುನೀತ್ರ ಪ್ರಾಣ ಉಳಿಸುವಂತೆ ಕೋಟ್ಯಂತರ ಅಭಿಮಾನಿಗಳು ಕಣ್ಣೀರು ಹಾಕುತ್ತಾ ದೇವರ ಮೊರೆ ಇಟ್ಟರೂ ಕೋರಿಕೆ ಫಲಿಸಲಿಲ್ಲ.
1975ರ ಮಾರ್ಚ್ 17ರಂದು ಚೆನ್ನೈನಲ್ಲಿ ಜನಿಸಿದ್ದ ಪುನೀತ್, 6 ವರ್ಷದ ಬಾಲಕ ಆಗಿದ್ದಾಗಲೇ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಒಟ್ಟು 29 ಸಿನಿಮಾಗಳಲ್ಲಿ ನಾಯಕನಟರಾಗಿ ಅಭಿನಯಿಸಿದ್ದರು. ಪ್ರೇಮದ ಕಾಣಿಕೆ, ಬೆಟ್ಟದ ಹೂವು, ಅಪ್ಪು, ಅಭಿ, ಆಕಾಶ್, ಮೌರ್ಯ, ಅರಸು, ಜಾಕಿ, ಅಣ್ಣಬಾಂಡ್, ವಂಶಿ, ಪೃಥ್ವಿ, ರಾಜಕುಮಾರ, ರಾಜಕುಮಾರ, ವೀರಕನ್ನಡಿಗ, ಯುವರತ್ನ... ಹಲವು ಸಿನಿಮಾಗಳಲ್ಲಿ ನಟಿಸಿದ್ದ ಪುನೀತ್, ಯೂತ್ ಐಕಾನ್ ಆಗಿದ್ದರು.
ಭರ್ಜರಿ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿತ್ತು. ಕೊನೇ ಹಂತದ ಶೂಟಿಂಗ್ ಮಾತ್ರ ಬಾಕಿ ಉಳಿದಿತ್ತು. ಗುರುವಾರವಷ್ಟೇ ನಿರ್ದೇಶಕ ಚೇತನ್ ವಿಜಯವಾಣಿಗೆ ಪ್ರತಿಕ್ರಿಯಿಸಿ, ‘ಕ್ರಿಸ್ಮಸ್ಗೆ ‘ಜೇಮ್ಸ್‘ ಚಿತ್ರದ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿದ್ದೇವೆ. ಅದಾದ ಬಳಿಕ 2022ರ ಮಾರ್ಚ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಇದೆ‘ ಎಂದಿದ್ದರು.
ಈ ಸಿನಿಮಾ ಹೊರತುಪಡಿಸಿದರೆ, ನಿರ್ದೇಶಕ ಪವನ್ ಕುಮಾರ್ ಅವರ ಜತೆಗೆ ದ್ವಿತ್ವ ಸಿನಿಮಾಕ್ಕೂ ಪುನೀತ್ ನಾಯಕ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ದರ್ಶನ್ ಸಹೋದರ ದಿನಕರ್ ನಿರ್ದೇಶನದ ಚಿತ್ರವನ್ನೂ ಪುನೀತ್ ಒಪ್ಪಿಕೊಂಡಿದ್ದರು. ಪೈಲ್ವಾನ್ ಸಿನಿಮಾ ನಿರ್ದೇಶಕ ಕೃಷ್ಣ, ಪುನೀತ್ ಸಲುವಾಗಿಯೂ ಒಂದು ಕಥೆ ಮಾಡಿದ್ದರು. ಅದೇ ರೀತಿ ಸಂತೋಷ್ ಆನಂದ್ ರಾಮ್ ಅವರ ಜತೆಗೂ ರಾಜಕುಮಾರ್, ಯುವರತ್ನ ಬಳಿಕ ಮೂರನೇ ಸಿನಿಮಾ ಮಾಡುವುದೂ ಅಧಿಕೃತವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಪುನೀತ್ ಬಾರದ ಲೋಕಕ್ಕೆ ಹೋಗಿಬಿಟ್ಟರು.