

ಚನ್ನಪಟ್ಟಣ: ಲೇವಾದೇವಿ, ಬಡ್ಡಿ ವ್ಯವಹಾರ ಸೇರಿ ಇನ್ನಿತರ ವ್ಯವಹಾರಗಳಲ್ಲಿ ನೀಡುವ ಚೆಕ್ಗಳು ಬೌನ್ಸ್ ಆಗುವ ಪ್ರಕರಣಗಳು ಮಾಮೂಲು. ಆದರೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಪಂಚಾಯಿತಿಯಿಂದ ನೀಡುವ ಗೌರವಧನದ ಚೆಕ್ ಬೌನ್ಸ್ ಆಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಪಂನಿಂದ ವಳೆಗೆರೆದೊಡ್ಡಿ ಗ್ರಾಪಂ ಸದಸ್ಯ ಮನೋಹರ್ ಎಂಬುವವರಿಗೆ ನೀಡಿದ ಸದಸ್ಯತ್ವದ ಗೌರವಧನದ ಬೌನ್ಸ್ ಆಗಿದ್ದು, ಬ್ಯಾಂಕ್ಗೆ ಹಣ ಡ್ರಾ ಮಾಡಲು ಹೋಗಿದ್ದ ಮನೋಹರ್ ಮುಜುಗರಕ್ಕೀಡಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಇಒಗೆ ದೂರು ನೀಡಿದ್ದಾರೆ.
ಸರ್ಕಾರದಿಂದ ಗ್ರಾಪಂ ಸದಸ್ಯರಿಗೆ ತಿಂಗಳಿಗೆ 3 ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಈ ಹಿಂದೆ ರ್ನಿದಿಷ್ಟ ಅನುದಾನದಲ್ಲಿ ಗೌರವಧನ ನೀಡುವ ವ್ಯವಸ್ಥೆ ಇತ್ತು. ತದನಂತರ, ಗೌರವಧನಕ್ಕೆಂದೇ ಪ್ರತ್ಯೇಕವಾಗಿ ಸರ್ಕಾರ ಅನುದಾನ ನೀಡುತ್ತಿದೆ. ಅದರಂತೆ ಈ ಸದಸ್ಯನಿಗೆ ಗ್ರಾಪಂ ಅಧಿಕಾರಿಗಳು ಚೆಕ್ ನೀಡಿದ್ದಾರೆ. ಸದಸ್ಯ ಹಣ ತೆಗೆದುಕೊಳ್ಳಲು ಚೆಕ್ ಅನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿದ್ದಾರೆ. ಆದರೆ, ಗ್ರಾಪಂ ಖಾತೆಯಲ್ಲಿ ಹಣ ಇಲ್ಲದೆ ಚೆಕ್ ಬೌನ್ಸ್ ಆಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸದಸ್ಯ ಮನೋಹರ್ ಗ್ರಾಪಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಪಂ ಸದಸ್ಯ, ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕ್ರಮಕ್ಕೆ ಆಗ್ರಹಿಸಿ ಜಿಪಂ ಸಿಇಒಗೆ ದೂರು ನೀಡಿದ್ದಾರೆ.