

ಕೊಟ್ಟೂರು(ವಿಜಯನಗರ): ಇದು ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಕುರಿತ ಇಂಟರೆಸ್ಟಿಂಗ್ ಸ್ಟೋರಿ.
ಈ ಘಟನೆ ನಡೆದಾಗ ರಜನಿಕಾಂತ್ ಇನ್ನೂ ಸಿನಿಮಾ ಸೇರಿರಲಿಲ್ಲ, ಇನ್ನೂ ಕಂಡಕ್ಟರ್ ಆಗಿದ್ದರು. ಸಾರಿಗೆ ಇಲಾಖೆಯಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿ 2013ರಲ್ಲಿ ನಿವೃತ್ತಿಯಾಗಿರುವ ಕೊಟ್ಟೂರಿನ ಲಾಲ್ಸಿಂಗ್, 1979ರಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ಇದನ್ನು ಅವರ ಬಾಯಲ್ಲೇ ಕೇಳಿ...
'ಅಂದು ನಮ್ಮ ಮೇಲಧಿಕಾರಿಗಳು ಒಂದೆರಡು ಬಸ್ ಚೆಕ್ ಮಾಡಿಕೊಂಡು ಬನ್ನಿ ಎಂದು ಸೂಚಿಸಿದ್ದರು. ಆಗ ಪ್ರಯಾಣಿಕರಿಂದ ತುಂಬಿದ್ದ ಮತ್ತು ಶಿವಾಜಿ ಗಾಯಕ್ವಾಡ್ (ಈಗಿನ ರಜನಿಕಾಂತ್) ಇದ್ದ ಬಿಎಂಟಿಸಿ ಬಸ್ ಚೆಕಿಂಗ್ಗೆ ಹೋಗಿದ್ದೆ. ರಜನಿಕಾಂತ್ ಇದ್ದ ಬಸ್ಸನ್ನು ನಿಲ್ಲಿಸಿದ್ದೆ. ಇದ್ದಕ್ಕಿದ್ದಂತೆ ಕಾಲೇಜು ಹುಡುಗ-ಹುಡುಗಿಯರು ಚೆಕಿಂಗ್ಗೆ ಅವಕಾಶ ನೀಡಲಿಲ್ಲ. "ಬಸ್ನಲ್ಲಿ ರಷ್ ಇದೆ. ನಾವು ಕಂಡಕ್ಟರ್ಗೆ ಕಾಸು ಕೊಟ್ಟಿದ್ದೇವೆ. ಅವರು ಟಿಕೆಟ್ ಕೊಡ್ತಾರೆ. ನೀವು ಚೆಕ್ ಮಾಡೋದು ಬೇಡ'' ಎಂದು ದಬಾಯಿಸಿದ್ದರು. ಬಸ್ನಲ್ಲಿದ್ದ ದೊಡ್ಡ ಗುಂಪು ಗಲಾಟೆ ಮಾಡಿ ನನ್ನನ್ನು ಕೆಳಗಿಳಿಸಿದರು. ಈ ಘಟನೆಯನ್ನು ಮೇಲಧಿಕಾರಿಗೆ ತಿಳಿಸಿದೆ. ಮೇಲಧಿಕಾರಿಗಳು ಸಹ "ಆ ಗಾಯಕ್ವಾವಾಡ್ ಇದ್ದ ಬಸ್ ಚೆಕ್ ಮಾಡೋದೇ ದೊಡ್ಡ ತಲೆನೋವು. ಹುಡುಗ-ಹುಡುಗಿಯರು ಅವರ ಸ್ಟೈಲ್ಗೆ ಫಿದಾ ಆಗಿದ್ದಾರೆ'' ಎಂದು ನನಗೆ ತಿಳಿಸಿದರು. ಕಂಡಕ್ಟರ್ ಆಗಿದ್ದಾಗಲೇ ರಜನಿಕಾಂತ್ ಮ್ಯಾನರಿಸಂಗೆ ಮನಸೋತಿದ್ದ ಕಾಲೇಜು ಹುಡುಗ-ಹುಡುಗಿಯರು ಬಸ್ನಲ್ಲಿ ಕಾಲಿಡದಷ್ಟು ತುಂಬಿರುತ್ತಿದ್ದರು...' ಸೋಮವಾರಷ್ಟೇ ರಜನಿಕಾಂತ್ ಅವರು ದಾದಾಸಾಹೇಬ್ ಫಾಲ್ಕೆ ಗೌರವ ಸ್ವೀಕರಿಸಿದ ಸಂದರ್ಭ ಈ ಘಟನೆಯನ್ನು ಲಾಲ್ಸಿಂಗ್ ಸ್ಮರಿಸಿದರು.