ಕಾಂಗ್ರೆಸ್​ಗೆ ಮತ್ತೊಂದು ಶಾಕ್​: ಗುಲಾಂ ನಬಿ ಆಜಾದ್​ ಬೆನ್ನಲ್ಲೇ 50ಕ್ಕೂ ಹೆಚ್ಚು ಮುಖಂಡರು ರಾಜೀನಾಮೆ

Ghulam Nabi Azad
Published on

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್​ ಅವರನ್ನು ಬೆಂಬಲಿಸಿ ಮಾಜಿ ಡಿಸಿಎಂ ತಾರಾ ಚಂದ್ ಸೇರಿದಂತೆ 50ಕ್ಕೂ ಹೆಚ್ಚು ಹಿರಿಯ ಮುಖಂಡರು ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ತಾರಾ ಚಾಂದ್, ಮಾಜಿ ಸಚಿವರಾದ ಅಬ್ದುಲ್ ಮಜಿದ್ ವಾನಿ, ಮನೋಹರ್ ಲಾಲ್ ಶರ್ಮಾ, ಘರು ರಾಮ್, ಮಾಜಿ ಶಾಸಕ ಬಲ್ವಾನ್ ಸಿಂಗ್ ಸೇರಿದಂತೆ ಹಲವರು ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಜಂಟಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಆ.26ರಂದು ಹಿರಿಯ ಮುಖಂಡ ಗುಲಾಂ ನಬಿ ಆಜಾದ್​ ರಾಜೀನಾಮೆ ಕೊಡುವ ಮೂಲಕ ಕಾಂಗ್ರೆಸ್​ಗೆ ಶಾಕ್​ ಕೊಟ್ಟಿದ್ದರು. ಆಜಾದ್​ರ ದಿಢೀರ್​ ರಾಜೀನಾಮೆಯು ಕಾಂಗ್ರೆಸ್​ ಪಾಳಯದಲ್ಲಿ ತಲ್ಲಣ ಮೂಡಿಸಿತ್ತು. ಅಷ್ಟೇ ಅಲ್ಲ, 4 ಪುಟಗಳ ರಾಜೀನಾಮೆ ಪತ್ರದಲ್ಲಿ ಪಕ್ಷ ತೊರೆಯುತ್ತಿರುವ ಕಾರಣವನ್ನೂ ತಿಳಿಸಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ದೂಷಿಸಿದ್ದರು.

ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ವಯಲದಲ್ಲಿ ಗುರುತಿಸಿಕೊಂಡಿದ್ದ ಗುಲಾಂ ನಬಿ ಆಜಾದ್​ ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬಹಳ ವರ್ಷಗಳಿಂದ ಕಾಂಗ್ರೆಸ್​ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಅನುಭವಿ ನಾಯಕ ಆಜಾದ್​, ಆ.26ರಂದು ರಾಜೀನಾಮೆ ಪತ್ರವನ್ನು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದರು. ಇದೀಗ ಇವರ ಹಾದಿಯನ್ನೇ ಹಿಡಿದ 50ಕ್ಕೂ ಹೆಚ್ಚು ಮುಖಂಡರು ಜಂಟಿಯಾಗಿ ರಾಜೀನಾಮೆ ಪತ್ರ ಬರೆದು ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ. ಇವರೆಲ್ಲರೂ ಆಜಾದ್​ ನೇತೃತ್ವದಲ್ಲಿ ಸ್ಥಾಪನೆಯಾಗಲಿರುವ ಹೊಸ ಪಕ್ಷಕ್ಕೆ ಸೇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net