

ಬೆಂಗಳೂರು: ುಡ್ ಪಾಯ್ಸನ್‌ನಿಂದಾಗಿ ಒಂದೇ ಕುಟುಂಬದ ಮೂವರು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ 5 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಕೆ.ಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಧೀರಜ್(೫) ಮೃತಪಟ್ಟ ಬಾಲಕ. ಬಾಲಕನ ತಂದೆ ಬಾಲರಾಜ್ ಮತ್ತು ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಪಿ ಅಗ್ರಹಾರದ ಭುವನೇಶ್ವರಿನಗರದ ನಿವಾಸಿಯಾದ ಬಾಲರಾಜ್ ಅವರು ಸ್ವಿಗ್ಗಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದು, ಪತ್ನಿ ನಾಗಲಕ್ಷ್ಮೀ ಗೃಹಿಣಿಯಾಗಿದ್ದಾರೆ. ಭಾನುವಾರ ರಾತ್ರಿ ಫ್ರಿಜ್‌ನಲ್ಲಿದ್ದ ವಿಷಕಾರಿ ಅಂಶವಿರುವ ಯಾವುದೋ ಆಹಾರ ಸೇವಿಸಿದ್ದು, ಸೋಮವಾರ ಬೆಳಗ್ಗೆ ೯.೩೦ ಕ್ಕೆ ಮೂವರು ತೀವ್ರ ಅಸ್ವಸ್ಥರಾಗಿ ಹೊಟ್ಟೆ ನೋವು ಎಂದು ಒದ್ದಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಮೂವರನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ದಾರಿ ಮಧ್ಯೆ ಬಾಲಕ ಧೀರಜ್ ಕೊನೆಯುಸಿರು ಎಳೆದಿದ್ದಾನೆ. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಧೀರಜ್ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ.
ಸದ್ಯ ಘಟನೆ ಬಗ್ಗೆ ವಿವರ ನೀಡಬೇಕಾದ ತಂದೆ-ತಾಯಿ ಕೂಡ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ಪೊಲೀಸರಿಗೆ ದೂರು ಕೊಡಲು ಅಥವಾ ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಹೇಳಲು ಯಾರು ಇಲ್ಲ. ಇಬ್ಬರಿಗೂ ಪ್ರಜ್ಞೆ ಬಂದ ಬಳಿಕ ಘಟನೆ ಹೇಗಾಯ್ತು ಎಂದು ಬೆಳಕಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬಾಲರಾಜ್ ಮತ್ತು ನಾಗಲಕ್ಷ್ಮೀ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲಿ ಒಟ್ಟು ನಾಲ್ಕು ಜನ ವಾಸವಿದ್ದರು. ಅಜ್ಜಿ ಮನೆಗೆ ಹೆಣ್ಣು ಮಗುವನ್ನು ಕಳುಹಿಸಲಾಗಿತ್ತು. ಪಿತೃ ಪಕ್ಷಕ್ಕೆ ಮಾಡಿದ್ದ ಹಳೇಯ ಆಹಾರವನ್ನು ಫ್ರಿಜ್‌ನಲ್ಲಿ ಇಡಲಾಗಿದ್ದು ಅದನ್ನು ತಿಂದ ನಂತರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮತ್ತೊಂದೆಡೆ ಬಾಲರಾಜ್ ತಂದಿದ್ದ ಕೇಕ್ ಸೇವಿಸಿದ್ದರಿಂದ ಬೆಳಗಾಗುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.