ಆಟವಾಡುತ್ತಿದ್ದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ; ನೇಪಾಳ ಮೂಲದ ಅಪರಾಧಿಗೆ ಜೀವಾವಧಿ ಶಿಕ್ಷೆ

rape (1)
Published on

ಬೆಂಗಳೂರು: ಅಣ್ಣನ ಜತೆ ಆಟವಾಡುತ್ತಿದ್ದ 3 ವರ್ಷದ ಬಾಲಕಿಯನ್ನು ಚಾಕೊಲೇಟ್ ಕೊಡಿಸುವುದಾಗಿ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ನೇಪಾಳದ ಮೂಲದ ಸೋನೊ ನಿಶಾದ್ (33) ಅಪರಾಧಿ. ಸಂತ್ರಸ್ತೆ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್. ರವಿಚಂದ್ರ, ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ. ಎ.ಕೆ. ನಾಗರಾಜಪ್ಪ ಅವರು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಅಪರಾಧಿ ಎಂದು ಘೋಷಣೆ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕೆಲಸ ಅರಸಿ ಬೆಂಗಳೂರಿಗೆ ಬಂದು ಚಿಕ್ಕಬೈರತಿಯಲ್ಲಿ ಶೆಡ್‌ನಲ್ಲಿ ನೆಲೆಸಿದ್ದ ನಿಶಾದ್, ಫ್ಲೆಂಬರ್ ಕೆಲಸ ಮಾಡುತ್ತಿದ್ದ. ಶೆಡ್ ಪಕ್ಕದಲ್ಲೇ ನೇಪಾಳ ಮೂಲದ ಮೃತ ಮಗುವಿನ ಕುಟುಂಬ ಸಹ ನೆಲೆಸಿತ್ತು.

2018ರ ಫೆ.26ರಂದು ಅಣ್ಣನ ಜೊತೆಯಲ್ಲಿ ಸಹೋದರಿ ಆಟವಾಡುತ್ತಿದ್ದನ್ನು ನಿಶಾದ್ ಗಮನಿಸಿದ್ದ. ಹತ್ತಿರ ಹೋಗಿ ಚಾಕೊಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ಮನೆ ಅಂಗಳದಿಂದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಶೆಡ್ ಪಕ್ಕದ ಪೋದೆಯಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದ.

ಬಾಲಕಿ ಅಳಲು ಶುರು ಮಾಡಿದಾಗ ಆಕೆಯ ಬಾಯಿ ಮುಚ್ಚಿ ದೌರ್ಜನ್ಯ ಎಸಗಿದ್ದ. ಎಲ್ಲಿ ಪಾಲಕರಿಗೆ ಬಾಲಕಿ ಹೇಳಿ ಬಿಟ್ಟರೇ ಸಿಕ್ಕಿಬೀಳುತ್ತೆನೆ ಎಂಬ ಭಯದಿಂದ ಅಪರಾಧಿ, 15 ಕೆಜಿಯ ಕಲ್ಲನ್ನು ಆಕೆಯ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದ. ಕೆಲವೇ ತಾಸಿನಲ್ಲಿ ವಿಷಯ ಗೊತ್ತಾಗಿ ಸ್ಥಳಕ್ಕೆ ದೌಡಾಯಿಸಿದ ಕೊತ್ತನೂರು ಪೊಲೀಸರು, ನಿಶಾದ್‌ನನ್ನು ಬಂಧಿಸಿದ್ದರು.

ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳು ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ನಿಶಾದ್ ಬಟ್ಟೆ ಮೇಲೆ ಸಿಕ್ಕ ಸಾಕ್ಷ್ಯಾಧಾರಗಳನ್ನು ಆರೋಪಪಟ್ಟಿಯಲ್ಲಿ ಪೊಲೀಸರು ಸಲ್ಲಿಸಿದ್ದರು. ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಕೋರ್ಟ್ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net