

ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ ನಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೂ ಕೆಲವರು ಇದೇ ವೈರಸ್ ಗೆ ಬಲಿಯಾಗಿದ್ದಾರೆ.
ಈಗ ಇನ್ನೋರ್ವ 29 ವರ್ಷದ ವೈದ್ಯ ಕೊರೊನಾ ವೈರಸ್ ನಿಂದ ಜೀವ ಕಳೆದುಕೊಂಡಿದ್ದಾರೆ. ವುಹಾನ್ ದ ಆಸ್ಪತ್ರೆಯ ಡಾ. ಪೆಂಗ್ ಯಿನ್ಹ್ವಾ ಎಂಬುವರು ಮೃತ ವೈದ್ಯ. ಈ ಡಾಕ್ಟರ್ ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡಲೆಂದೇ ತಮ್ಮ ಮದುವೆಯನ್ನೂ ಮುಂದೂಡಿದ್ದರು. ಆದರೆ ವೈರಸ್ ಅವರನ್ನೇ ಬಲಿಪಡೆದಿದೆ.
ಪೆಂಗ್ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ಚೀನಾದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ದಿನೇದಿನೇ ಆಸ್ಪತ್ರೆಗೆ ಸೇರುವ ರೋಗಿಗಳ ಸಂಖ್ಯೆಯೂ ಅಧಿಕವಾಗುತ್ತಿತ್ತು. ಇದೇ ಕಾರಣಕ್ಕೆ ಡಾ.ಪೆಂಗ್ ನಿಶ್ಚಯವಾಗಿದ್ದ ಮದುವೆಯನ್ನು ಮುಂದೂಡಿದ್ದರು.
ಆದರೆ ಜ.25 ರಂದು ಪೆಂಗ್ ಅವರಲ್ಲಿ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಅವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವುಹಾನ್ ನಲ್ಲಿರುವ ಫರ್ಸ್ಟ್ ಪೀಪಲ್ಸ್ ಆಸ್ಪತ್ರೆಗೇ ದಾಖಲಿಸಲಾಯಿತು. ಬಳಿಕ ಜ.30 ರಂದು ಜಿನ್ಯಿಂಟಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಉಳಿಸಿಕೊಳ್ಳಲು ಇತರ ವೈದ್ಯರು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.
ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡುತ್ತ, ಅದೇ ವೈರಸ್ ತಗುಲಿ ಮೃತಪಟ್ಟ ವೈದ್ಯರನ್ನು ಹುತಾತ್ಮರೆಂದು ಪರಿಗಣಿಸಿ, ಅದೇ ರೀತಿ ಗೌರವಿಸಲು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಅಗತ್ಯ ಪರಿಹಾರ ನೀಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿ ಎಂದು ಚೀನಾ ಆರೋಗ್ಯ ಇಲಾಖೆ ಆರೋಗ್ಯ ಸಂಸ್ಥೆಗಳಿಗೆ ಸೂಚಿಸಿದೆ.
ಕೊರೊನಾ ವೈರಸ್ ಬಗ್ಗೆ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದ 34 ವರ್ಷದ ವೈದ್ಯ ಲಿ ವೆನ್ಲಿಯಾಂಗ್ ಫೆಬ್ರವರಿ 7 ರಂದು ಮೃತಪಟ್ಟಿದ್ದರು. (ಏಜೆನ್ಸೀಸ್)