

ನವದೆಹಲಿ: ಫೇಸ್ಬುಕ್ನಲ್ಲಿ ಕೆಲಸ ನಿರ್ವಹಿಸುತ್ತಿರುವವರ ಪೈಕಿ ಸಾವಿರಾರು ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಆವರಿಸಿದೆ! ಸುಮಾರು 12,000 ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಮೆಟಾ ಪ್ಲಾಟ್ಫಾರ್ಮ್ ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದ್ದು, ಶೀಘ್ರದಲ್ಲೇ ಕೆಲಸದಿಂದ ವಜಾ ಆಗಲಿದ್ದಾರೆ.
12 ಸಾವಿರ ನೌಕರರು ವಜಾಗೊಂಡರೆ ಫೇಸ್ಬುಕ್ನ ಒಟ್ಟು ಉದ್ಯೋಗಿಗಳ ಶೇ.15ರಷ್ಟು ಖಡಿತ ಮಾಡಿದಂತೆ ಆಗುತ್ತದೆ. ದೊಡ್ಡ ಪ್ರಮಾಣದಲ್ಲಿ ನೌಕರರನ್ನು ಮನೆಗೆ ಕಳಿಸುವ ಬಗ್ಗೆ ಕಂಪನಿಯಲ್ಲಿ ಆಂತರಿಕವಾಗಿ ಯೋಜನೆ ಸಿದ್ಧವಾಗುತ್ತಿದೆ. ಕಳಪೆಯಾಗಿ ಕೆಲಸ ಮಾಡುವವರ ಪಟ್ಟಿ ಸಿದ್ಧವಾಗುತ್ತಿದೆ ಎಂದೂ ತಿಳಿದು ಬಂದಿದೆ.
ನೇಮಕಾತಿಗಳನ್ನು ಸ್ಥಗಿತಗೊಳಿಸಿರುವುದಾಗಿ ಕಳೆದ ತಿಂಗಳು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್ಬರ್ಗ್ ಘೋಷಿಸಿದ್ದರು. ಇದರ ಬೆನ್ನಲ್ಲೇ ದೊಡ್ಡ ಮಟ್ಟದಲ್ಲಿ ನೌಕರರನ್ನು ವಜಾ ಮಾಡುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಸಿಬ್ಬಂದಿ ಮತ್ತು ಮಾರ್ಕ್ ಝುಕರ್ಬರ್ಗ್ ನಡುವೆ ಇತ್ತೀಚೆಗೆ ನಡೆದ ಸಾಪ್ತಾಹಿಕ ಪ್ರಶ್ನೋತ್ತರ ಸೆಷನ್ನಲ್ಲಿ, "ಲೇ ಆಫ್'' ಮಾಡಲು ತಂಡಗಳ ಶೇ.15 ಉದ್ಯೋಗಿಗಳನ್ನು ಆಯ್ಕೆ ಮಾಡುವುದು ಅಗತ್ಯ ಎಂದು ಆಯಾ ವಿಭಾಗಗಳ ನಿರ್ದೇಶಕರಿಗೆ ಕಾರ್ಯ ನಿರ್ವಾಹಕರು ಸೂಚಿಸಿದ್ದಾಗಿ ಬಿಸಿನೆಸ್ ಇನ್ಸೈಡರ್ ವರದಿ ಹೇಳಿದೆ.