

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿ ವಿದ್ಯುತ್ ಸಂಪರ್ಕಕ್ಕೆ ಕಾದಿರುವ ಕುಟುಂಬಗಳು 100 ದಿನಗಳೊಳಗೆ 'ಬೆಳಕು' ಕಾಣಲಿವೆ.
ಇಂಧನ ಇಲಾಖೆಯಲ್ಲಿ 100 ದಿನಗಳ ಕಾರ್ಯಕ್ರಮ ರೂಪಿಸಲಾಗಿದ್ದು, ಸೆಪ್ಟೆಂಬರ್ 1ರಿಂದ ಕಾರ್ಯಾರಂಭಿಸಿದೆ. ರಾಜ್ಯದ ಹಳ್ಳಿಗಳಲ್ಲಿರುವ ಮೂರು ಲಕ್ಷ ಮನೆಗಳಿಗೆ ಸ್ಥಳೀಯ ಸಂಸ್ಥೆಯ ಎನ್ಒಸಿ ಅಗತ್ಯವಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಂಗಳವಾರ ಮಾತನಾಡಿದ ಸುನೀಲ್ ಕುಮಾರ್, ಸಚಿವರ ವಸತಿ ಗೃಹ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಪ್ರಿಪೇಡ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ವಿದ್ಯುತ್ ಬಿಲ್ ಬಾಕಿ ಉಳಿದು ಎಸ್ಕಾಂಗಳಿಗೆ ಆರ್ಥಿಕ ಹೊರೆ ತಪ್ಪಲಿದೆ ಎಂದರು.
ರೀಚಾರ್ಜ್ ಸೆಂಟರ್: ಎಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಪ್ರೋತ್ಸಾಹ, ಅನುಕೂಲತೆ ಕಲ್ಪಿಸಲೆಂದು ರಾಜ್ಯಾದ್ಯಂತ 500 ರೀಚಾರ್ಜ್ ಸೆಂಟರ್ಗಳನ್ನು ಸ್ಥಾಪಿಸಲಾಗುವುದು.
ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳಿಗೆ 30 ದಿನಗಳೊಳಗೆ ವಿದ್ಯುತ್ ಸಂಪರ್ಕ, ವಿದ್ಯುತ್ ವಿಭಾಗ ಕೇಂದ್ರಗಳಲ್ಲಿ ಪರಿವರ್ತಕ ಬ್ಯಾಂಕ್ ಸ್ಥಾಪಿಸಿ, ಕೆಟ್ಟ ಪರಿವರ್ತಕ 24 ತಾಸಿನೊಳಗೆ ಬದಲಾಯಿಸಲಾಗುವುದು ಎಂದು ಸುನೀಲ್ ಕುಮಾರ್ ಹೇಳಿದರು.