9ಕ್ಕೆ ಮರಾಠ ಅಭಿವೃದ್ಧಿ ನಿಗಮ ಉದ್ಘಾಟನೆ

Vidhana Soudha
Published on

ಬೆಂಗಳೂರು: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಉದ್ಘಾಟನೆ, ಲಾಂಛನ ಅನಾವರಣ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜು.19ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಗ್ಗೆ 11ಕ್ಕೆ ಗವಿಪುರಂ ಭವಾನಿ ದತ್ತ ಪೀಠದ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ವಿಕಾಸಸೌಧದಲ್ಲಿ ಬುಧವಾರ ನಿಗಮದ ಅಧ್ಯಕ್ಷ ಡಾ.ಎಂ.ಜಿ.ಮುಳೆ ಈ ವಿಷಯ ತಿಳಿಸಿದರು. ಇದೇ ಸಂದರ್ಭದಲ್ಲಿ ನಿಗಮದ ವಿವಿಧ ಯೋಜನೆಗಳನ್ನು ಸಿಎಂ ಬೊಮ್ಮಾಯಿ ಘೋಷಿಸಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಗಮದ ಅಂತರ್ಜಾಲ ತಾಣ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿಗಮದ ಯೋಜನೆಗಳ ಪರಿಚಯ ಪುಸ್ತಕ ಬಿಡುಗಡೆ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಭಾಗವಹಿಸುವರು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕರು, ಅಧಿಕಾರಿಗಳು, ಸಮುದಾಯದ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ನಿಗಮಕ್ಕೆ ಒಟ್ಟು 100 ಕೋಟಿ ರೂ. ಮಂಜೂರಾಗಿದ್ದು, ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿವಿಧ ಚಟುವಟಿಕೆಗಳಿಗಾಗಿ ಈಗಾಗಲೆ 2.50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಡಾ.ಎಂ.ಜಿ.ಮುಳೆ ಹೇಳಿದರು.

ಸೈನಿಕ ಶಾಲೆ ತೆರೆಯಲು ಚಿಂತನೆ: ಗದಗ ಜಿಲ್ಲೆಯ ಶ್ರೀಮಂತಗಢದಲ್ಲಿ ನಿಗಮದಿಂದ ಸೈನಿಕ ವಸತಿ ತೆರೆಯಬೇಕೆಂಬ ಚಿಂತನೆಯಿದ್ದು, ಕೇಂದ್ರ ರಕ್ಷಣಾ ಇಲಾಖೆ ಅಥವಾ ರಾಜ್ಯ ಸರ್ಕಾರದ ನೆರವು ಪಡೆಯುವ ಯೋಚನೆಯಿದೆ. ಕೇಂದ್ರದ ರಕ್ಷಣಾ ಇಲಾಖೆಗೆ ವಿಜಯಪುರ ಸೈನಿಕ ಶಾಲೆ ಜತೆಗೆ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಅನುಮತಿ ನೀಡಿದೆ. ಇದೇ ಮಾದರಿಯಲ್ಲಿ ನಿಗಮ ಸ್ಥಾಪಿಸಲು ಉದ್ದೇಶಿತ ಸೈನಿಕ ವಸತಿ ಶಾಲೆಗೂ ರಾಜ್ಯ ಸರ್ಕಾರದ ಮೂಲಕ ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗುವುದು. ಉಡುಪಿ, ಮಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಸೈನಿಕ ವಸತಿ ಶಾಲೆ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನಿಗಮದ ಶಾಲೆಗೂ ಅನುದಾನ ಪಡೆಯುವ ಯೋಚನೆಯಿದೆ ಡಾ.ಎಂ.ಜಿ.ಮುಳೆ ಹೇಳಿದರು.

ಮಿಲ್ಟ್ರಿ ಕ್ಯಾಂಟೀನ್: ಸಮುದಾಯದ ಮಾಂಸಾಹಾರ ಖಾನಾವಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಮರಾಠ ಮಿಲ್ಟ್ರಿ ಕ್ಯಾಂಟೀನ್ ಯೋಜನೆ ರೂಪಿಸಿದ್ದು, ಬೆಂಗಳೂರಿನಲ್ಲಿ 10, ಉಳಿದೆಡೆ 30 ಸೇರಿ ಒಟ್ಟು 40 ಕ್ಯಾಂಟೀನ್ ತೆರೆ ಯಲು ನಿರ್ಧರಿಸಲಾಗಿದೆ. ಹಾಪ್​ಕಾಪ್, ಔಟ್​ಲೆಟ್​ಗಳ ರೀತಿಯಲ್ಲಿ ಕ್ಯಾಂಟೀನ್​ಗಳಿಗೆ ಕರಾವಳಿ, ಉತ್ತರಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರತ್ಯೇಕ ವಿನ್ಯಾಸ ರಚಿಸಲಾಗಿದೆ. ಕ್ಯಾಂಟೀನ್ ವಿನ್ಯಾಸಗೊಳಿಸುವ ತಂಡವೇ ಕ್ಯಾಂಟೀನ್ ತೆರೆಯಲು ಬರುವವರಿಗೆ ಮಾಂಸಾಹಾರ ತಯಾರಿಕೆ, ವಿಶೇಷ ಖಾದ್ಯಗಳ ತರಬೇತಿ ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net