

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಿಯಾಯಿತಿಗೆ ಶನಿವಾರವೇ(ಸೆ.9) ಕೊನೆಯ ದಿನವಾಗಿದೆ. ಸೌಲಭ್ಯ ಬಳಸಿಕೊಳ್ಳುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಫೆಬ್ರವರಿ.11ರ ಒಳಗೆ ವಿಧಿಸಿರುವ ಟ್ರಾಫಿಕ್ ಫೈನ್ ಮೇಲೆ ಶೇ.50 ರಿಯಾಯಿತಿ ನೀಡಿ ಜುಲೈ 4 ರಿಂದ ಸೆ.9 ವರೆಗೆ ಪಾವತಿಗೆ ಸಾರಿಗೆ ಇಲಾಖೆ ಸೂಚಿಸಿದೆ. ಶನಿವಾರ ಕೊನೆಯ ದಿನವಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ಈ ಮೊದಲು ಎರಡು ಬಾರಿ ಡಿಸ್ಕೌಂಟ್ ಕೊಟ್ಟಾಗ ವಾಹನ ಮಾಲೀಕರು, ಸ್ವಯಂ ಪ್ರೇರಿತವಾಗಿ ಸಂಚಾರ ಪೊಲೀಸರ ಬಳಿ ಮತ್ತು ಆನ್‌ಲೈನ್‌ನಲ್ಲಿ ದಂಡ ಪಾವತಿ ಮಾಡಿದ್ದರು. ನೂರಾರು ಕೋಟಿ ರೂ. ಸಂಗ್ರಹವಾಗಿತ್ತು. 3ನೇ ಬಾರಿ ಅವಕಾಶ ಕೊಟ್ಟಾಗ ಜನರಿಂದ ಸ್ಪಂದನೆ ಲಭಿಸಿಲ್ಲ. ಇದೀಗ ಕೊನೆಯ ದಿನವೂ ಮುಗಿಯುತ್ತಿದೆ.
ಫೆಬ್ರವರಿ.11ರ ಒಳಗೆ ವಿಧಿಸಿರುವ ದಂಡದ ಮೇಲೆ ಡಿಸ್ಕೌಂಟ್ ಕೊಟ್ಟಿರುವುದರಿಂದ ಬಹುತೇಕರು 2ನೇ ಬಾರಿ ಅವಕಾಶ ಕೊಟ್ಟಾಗಲೇ ಪಾವತಿ ಮಾಡಿದ್ದರು. ಅದಕ್ಕಾಗಿ 3ನೇ ಬಾರಿ ರಿಯಾಯಿತಿ ನೀಡಿದಾಗ ಸ್ಪಂದನೆ ಲಭಿಸಿಲ್ಲ ಎಂದು ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
8.07 ಕೋಟಿ ಸಂಗ್ರಹ: ಮೂರನೇ ಬಾರಿಗೆ ಟ್ರಾಫಿಕ್ ಫೈನ್ ಪಾವತಿಗೆ ಎರಡು ದಿನಗಳ ಕಾಲ ಡಿಸ್ಕೌಂಟ್ ಅವದಿ ನೀಡಲಾಗಿತ್ತು. ಈ ವೇಳೆ ವಾಹನ ಮಾಲೀಕರು ಸ್ವಯಂ ಪ್ರೇರಿತವಾಗಿ ದಂಡ ಪಾವತಿ ಮಾಡಿದ್ದಾರೆ. ಇದರಿಂದ 2,53,519 ಪ್ರಕರಣಗಳಲ್ಲಿ 8,07,73,190 ರೂ. ಸಂಗ್ರಹವಾಗಿದೆ. ಕೊನೆಯ ದಿನ ಮತ್ತಷ್ಟು ದಂಡ ಸಂಗ್ರಹವಾಗುವ ನಿರೀಕ್ಷೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.