VIDEO: ಸಂತ್ರಸ್ತರಿಗಾಗಿ ಆಹಾರ ಪೂರೈಸುತ್ತಿರುವ ಶತಾಯುಷಿ ಅಜ್ಜಿಗೆ ಮನಸೋತ ನೆಟ್ಟಿಗರು

ajjiweb
Published on

ನವದೆಹಲಿ: ಸೇವೆ ಮಾಡಲು ವಯಸ್ಸೂ ಮುಖ್ಯವಲ್ಲ, ಸಿರಿತನವೂ ಮುಖ್ಯವಲ್ಲ, ಬದಲಿಗೆ ಮನಸ್ಸು ಮುಖ್ಯ ಎನ್ನುವುದನ್ನು ಈಗಾಗಲೇ ಹಲವಾರು ಮಂದಿ ಸಾಬೀತು ಮಾಡುತ್ತಲೇ ಬಂದಿದ್ದಾರೆ.

ಕೈಯಲ್ಲಿ ಹಣವಿಲ್ಲದಿದ್ದರೂ ಸಾಲಸೋಲ ಮಾಡಿ ನೆರವು ನೀಡುವವರು ಒಂದೆಡೆಯಾದರೆ, ತಮ್ಮ ವಯಸ್ಸಿನ ಹಂಗು ತೊರೆದು ಇತರರಿಗೆ ಮನ ಮಿಡಿಯುವವರು ಕೆಲವರು.

ಅಂಥದ್ದೇ ಒಬ್ಬ ಅಜ್ಜಿ ಮುಂಬೈನವರು. ಈ ಅಜ್ಜಿಗೆ ಇನ್ನೊಂದೆರಡು ತಿಂಗಳಿನಲ್ಲಿಯೇ 100 ವರ್ಷ ತುಂಬಲಿದೆ. ಅಂಥದ್ದರಲ್ಲಿ ಇವರು ಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ತಮ್ಮ ಮನೆಯಲ್ಲಿಯೇ ಆಹಾರವನ್ನು ತಯಾರಿಸಿ ಅದನ್ನು ಪ್ಯಾಕ್​ ಮಾಡುವ ಮೂಲಕ ಕಾರ್ಮಿಕರಿಗೆ ನೀಡಿ ನೆರವಾಗುತ್ತಿದ್ದಾರೆ.

ಮುಂಬೈನಲ್ಲಿ ವಾಸಿಸುತ್ತಿರುವ ಈ ಶತಾಯುಷಿಯ ಸಂಬಂಧಿಯೊಬ್ಬರು ಇವರ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿದ್ದು ಇದೀಗ ಭಾರಿ ವೈರಲ್​ ಆಗಿದೆ.

ಪಾಕಿಸ್ತಾನದ ಕರಾಚಿ ಮೂಲದ ವಕೀಲರಾದ ಜಾಹಿದ್ ಇಬ್ರಾಹಿಂ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ, ಇದು ನನ್ನ 99 ವಯಸ್ಸಿನ ಚಿಕ್ಕಮ್ಮನವರ ವಿಡಿಯೋವಾಗಿದ್ದು, ಆಕೆ ಮುಂಬೈನಲ್ಲಿ ವಲಸೆ ಕಾರ್ಮಿಕರಿಗೆ ವಿತರಿಸಲು ಆಹಾರದ ಪ್ಯಾಕೆಟ್​ಗಳನ್ನು ಮಾಡುವುದನ್ನು ಕಾಣಬಹುದಾಗಿದೆ ಎಂದಿದ್ದಾರೆ. ಅಜ್ಜಿಯ ಹೆಸರನ್ನು ಅವರು ನಮೂದಿಸಿಲ್ಲ.

ಆದರೆ ಶತಾಯುಷಿಯ ಕಾರ್ಯಕ್ಕೆ ಮಾತ್ರ ಜಗತ್ತಿನಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

ಒಂದೇ ದಿನದಲ್ಲಿ ಈ ವಿಡಿಯೋ 1.6 ಲಕ್ಷಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿದ್ದು 11ಸಾವಿಕ್ಕಿಂತ ಅಧಿಕ ಮಂದಿ ಲೈಕ್​, ಕಮೆಂಟ್​ ಮಾಡಿದ್ದಾರೆ. ಇದು ಸುಮಾರು 2 ಸಾವಿರ ರೀಟ್ವೀಟ್​ ಕಂಡಿದೆ. ಅಜ್ಜಿಗೆ ಇನ್ನೂ ಹೆಚ್ಚಿನ ಆಯಸ್ಸು ಸಿಕ್ಕು, ಅವರು ಇನ್ನೂ ಹೆಚ್ಚಿನ ನೆರವು ಮಾಡುವ ಶಕ್ತಿ ಅವರಿಗೆ ದೊರಕಲಿ ಎಂದಿದ್ದಾರೆ ಕಮೆಂಟಿಗರು (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net