ಕರೊನಾದ ಮತ್ತೊಂದು ತಲೆನೋವು: ಲಕ್ಷಣಗಳೇ ಇಲ್ಲದ ಶೇ.28 ಮಂದಿಗೆ ಸೋಂಕು!

corona-studyweb
Published on

ನವದೆಹಲಿ: ಕರೊನಾ ವೈರಸ್​ ಒಕ್ಕರಿಸಿ ಎರಡು ತಿಂಗಳ ಮೇಲಾದರೂ, ಇದರ ವಿಧವಿಧ ಮುಖಗಳು ಬಹಿರಂಗಗೊಳ್ಳುತ್ತಲೇ ಇವೆ. ಈ ಸೋಂಕಿನ ಕುರಿತಂತೆ ಅಧ್ಯಯನಗಳ ನಡೆಯುತ್ತಿರುವಂತೆಯೇ, ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ.

ಇಂತಿಂಥ ಲಕ್ಷಣಗಳು ಇದ್ದರೆ ಕರೊನಾ ಸೋಂಕು ಬಾಧಿಸಿರಬಹುದು ಎಂದು ಪತ್ತೆಹಚ್ಚಿಕೊಳ್ಳಿ ಎಂದು ಇಲ್ಲಿಯವರೆಗೆ ಹೇಳಿದ್ದಾಯ್ತು. ಇದೀಗ ಅತ್ಯಂತ ಆತಂಕಕಾರಿ ವಿಷಯವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೊರಗೆಡವಿದೆ. ಅದೇನೆಂದರೆ ಶೇ.28ರಷ್ಟು ಮಂದಿಯಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದೇ ಇಲ್ಲವಂತೆ. ಆದರೂ ಅವರು ಸೋಂಕಿತರಾಗಿರುತ್ತಾರೆ ಎಂದಿದೆ ಈ ವರದಿ.

ಐಸಿಎಂಆರ್‌ ಇತರ ಕೆಲವು ಸಂಸ್ಥೆಗಳೊಂದಿಗೆ ಸೇರಿ ಈ ಅಧ್ಯಯನ ನಡೆಸಿದೆ. ಜನವರಿ 22ರಿಂದ ಎಪ್ರಿಲ್‌ 30ರವರೆಗೆ ಭಾರತದಲ್ಲಿ ಕೊವಿಡ್ ಸೋಂಕು ದೃಢಪಟ್ಟ 40,184 ಮಂದಿಯಲ್ಲಿ ಕನಿಷ್ಠ ಶೇ.28ರಷ್ಟು ಮಂದಿಯಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ಈ ಅಧ್ಯಯನಿಂದ ಸಾಬೀತಾಗಿದೆ!

ಸೋಂಕಿನ ಲಕ್ಷಣ ಇಲ್ಲದೇ ಜನರು ಹುಷಾರಾಗಿ ಇದ್ದರೆ ಏನೂ ಆತಂಕಪಡುವ ಅಗತ್ಯವೇ ಇರಲಿಲ್ಲ. ಆದರೆ ತಮಗೆ ಗೊತ್ತಿಲ್ಲದೆಯೇ ಇವರು ಬೇರೆಯವರ ಸಂಪರ್ಕಕ್ಕೆ ಬಂದಾಗ, ಅದು ಪ್ರಸಾರ ಆಗುವ ಎಲ್ಲಾ ಸಾಧ್ಯತೆಗಳು ಇವೆ ಎನ್ನುವುದು ಈಗಿರುವ ಆತಂಕ. ಇಂಡಿಯನ್‌ ಜರ್ನಲ್‌ ಆಫ್ ಮೆಡಿಕಲ್‌ ರಿಸರ್ಚ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ದೇಶದಲ್ಲಿನ ಶೇ. 28.1 ಸೋಂಕಿತರು ರೋಗಲಕ್ಷಣ ಇಲ್ಲದೇ ಇರುವವರು, ಶೇ.25.3ರಷ್ಟು ಮಂದಿ ನೇರ ಮತ್ತು ಅಧಿಕ ರಿಸ್ಕ್ ಇರುವ ರೋಗಿಗಳ ಸಂಪರ್ಕಕ್ಕೆ ಬಂದವರು ಹಾಗೂ ಶೇ.2.8ರಷ್ಟು ಮಂದಿ ಸೂಕ್ತ ವೈಯಕ್ತಿಕ ರಕ್ಷಣೆಯಿಲ್ಲದೆ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿರುವ ಆರೋಗ್ಯ ಕಾರ್ಯಕರ್ತರು ಎಂದಿದೆ ವರದಿ.

ರೋಗ ಲಕ್ಷಣವೇ ಇಲ್ಲದೆ ಸೋಂಕು ದೃಢಪಟ್ಟವರ ಸಂಖ್ಯೆ ಶೇ.28.1ಕ್ಕೆ ಸೀಮಿತವಾಗಿರಲಿಕ್ಕಿಲ್ಲ. ಈ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆಯೂ ಇದೆ ಎಂಬ ಆತಂಕವನ್ನು ಐಸಿಎಂಆರ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎಪಿಡಮಿಯಾಲಜಿಯ ನಿರ್ದೇಶಕ ಮನೋಜ್‌ ಮಹೇರ್‌ಕರ್‌ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, 50 ರಿಂದ 69 ವಯೋಮಾನದವರ ಮೇಲೆ ಸೋಂಕು ದಾಳಿಯ ಸಾಧ್ಯತೆ ಹೆಚ್ಚಿದ್ದು, 10 ವರ್ಷಗಳಿಗಿಂತ ಕೆಳಗಿನವರಿಗೆ ಈ ಸಾಧ್ಯತೆ ಕಡಿಮೆ. ಅಲ್ಲದೆ, ಮಹಿಳೆಯರಿಗಿಂತ ಪುರುಷರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂದೂ ವರದಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net