ರಾಜ್ಯಗಳಿಗೆ 97 ಸಾವಿರ ಕೋಟಿ ರೂಪಾಯಿ ನಷ್ಟ

Lockdown Losses 13 May 20
Published on

ಮುಂಬೈ: ಕರೊನಾ ಲಾಕ್​ಡೌನ್​ನಿಂದಾಗಿ ಕರ್ನಾಟಕ ಸಹಿತ ಪ್ರಮುಖ ರಾಜ್ಯಗಳಿಗೆ ಏಪ್ರಿಲ್ ತಿಂಗಳಲ್ಲಿ ಸುಮಾರು 97,100 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಗದು ಕೊರತೆಯಿಂದ ಬಳಲುತ್ತಿವೆ. ರಾಜ್ಯಗಳ ಪರಿಸ್ಥಿತಿ ತೀವ್ರ ಅಯೋಮಯವಾಗಿದೆ ಎಂದು ರೇಟಿಂಗ್ಸ್ ಸಂಸ್ಥೆಯಾದ ‘ಇಂಡಿಯಾ ರೇಟಿಂಗ್ಸ್’ ಬುಧವಾರ ಹೇಳಿದೆ.

ಕರೊನಾ ವಿರುದ್ಧ ಹೋರಾಟ ಹಾಗೂ ಅದರ ವೆಚ್ಚವನ್ನು ವಾಸ್ತವವಾಗಿ ರಾಜ್ಯಗಳೇ ಭರಿಸಬೇಕಾಗಿರುವುದರಿಂದ ಅವುಗಳ ಸಂಕಷ್ಟ ಹೆಚ್ಚಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ವರದಿ ಅಭಿಪ್ರಾಯಪಟ್ಟಿದೆ. ಲಾಕ್​ಡೌನ್ ಅನುಷ್ಠಾನದಿಂದ ಉತ್ಪಾದನೆ, ಸರಬರಾಜು ಸರಪಣಿ, ವಾಣಿಜ್ಯ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ. ವಿಮಾನಯಾನ, ಪ್ರವಾಸೋದ್ಯಮ, ಹೋಟೆಲ್ ಇನ್ನಿತರ ಉದ್ಯಮಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಒಂದು ವೇಳೆ ಮುಂದಿನ ವಾರ ಲಾಕ್​ಡೌನ್ ತೆರವುಗೊಂಡರೂ ಎರಡನೇ ತ್ರೈಮಾಸಿಕದ ವರೆಗೆ ಆರ್ಥಿಕ ಚಟುವಟಿಕೆಗಳು ಸಹಜಸ್ಥಿತಿಗೆ ಮರಳುವುದು ಕಷ್ಟಸಾಧ್ಯ ಎಂದು ವರದಿ ಎಚ್ಚರಿಸಿದೆ. 21 ಪ್ರಮುಖ ರಾಜ್ಯಗಳಿಗೆ ಏಪ್ರಿಲ್​ನಲ್ಲಿ 97,100 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು ಅದು ಹೇಳಿದೆ. ಗೋವಾ, ಕೇರಳ, ಗುಜರಾತ್, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಈ ರಾಜ್ಯಗಳ ಒಟ್ಟು ಆದಾಯದಲ್ಲಿ ಶೇ. 65- 76 ಭಾಗ ಸ್ವಂತ ಮೂಲದಿಂದ ಸಂಗ್ರಹವಾಗುತ್ತವೆ.

ಆದಾಯ ಗುರಿ ಎಷ್ಟಿತ್ತು?

ಈ ರಾಜ್ಯಗಳು ಏಪ್ರಿಲ್​ನಲ್ಲಿ ಗಳಿಸಬೇಕಿದ್ದ ಜಿಎಸ್​ಟಿ ಆದಾಯ 26,962 ಕೋಟಿ ರೂ, ವ್ಯಾಟ್ ಆದಾಯ 17,895 ಕೋಟಿ ರೂ., ಅಬಕಾರಿ ಸುಂಕ 13,785 ಕೋಟಿ ರೂ., ಸ್ಟಾಂಪ್ ಮತ್ತು ನೋಂದಣಿ ಶುಲ್ಕ 11,397 ಕೋಟಿ ರೂ. ಹಾಗೂ ತೆರಿಗೆಯೇತರ ಆದಾಯ 17,595 ಕೋಟಿ ರೂ.ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net