97 ಲಕ್ಷ ಮಾಲಿನ್ಯಕಾರಕ ವಾಹನ ಸ್ಕ್ರ್ಯಾಪ್; ಕೇಂದ್ರ, ರಾಜ್ಯಗಳಿಗೆ 40,000 ಕೋಟಿ ರೂ. ಜಿಎಸ್​ಟಿ ಗಳಿಕೆ

Nitin Gadkari
Published on

ನವದೆಹಲಿ: ದೇಶದಲ್ಲಿರುವ 97 ಲಕ್ಷ ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದರೆ ಕೇಂದ್ರ ಮತ್ತು ರಾಜ್ಯಗಳು 40,000 ಕೋಟಿ ರೂ. ಜಿಎಸ್​ಟಿ ಆದಾಯ ಗಳಿಸಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.

ಎಸಿಎಂಎ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅವರು, ಈ ವರ್ಷದ ಆಗಸ್ಟ್​ವರೆಗೆ 3 ಲಕ್ಷ ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದ್ದು, ಇವುಗಳಲ್ಲಿ 1.41 ಲಕ್ಷ ಸರ್ಕಾರಿ ವಾಹನಗಳೂ ಇವೆ ಎಂದರು. ಒಂದು ಅಂದಾಜಿನ ಪ್ರಕಾರ, ಇನ್ನೂ 97 ಲಕ್ಷ ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕಾಗಿದೆ. ಇದರಿಂದ 70 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಎಲ್ಲಾ ಅನರ್ಹ ವಾಹನಗಳ ರದ್ದತಿಯಿಂದ ಕೇಂದ್ರ ಮತ್ತು ರಾಜ್ಯಗಳಿಗೆ 40,000 ಕೋಟಿ ರೂ. ಜಿಎಸ್​ಟಿ ಲಾಭ ದೊರೆಯುತ್ತದೆ. ಪ್ರಸ್ತುತ ತಿಂಗಳಿಗೆ ಸರಾಸರಿ 16,830 ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುತ್ತಿದ್ದು, ಈ ಕಾರ್ಯಕ್ಕೆ ಖಾಸಗಿ ವಲಯ 2,700 ಕೋಟಿ ರೂ. ಹೂಡಿಕೆ ಮಾಡಿದೆ ಎಂದರು.

ಜಿಎಸ್​ಟಿ ತರ್ಕಬದ್ಧಗೊಳಿಸುವಿಕೆಯಿಂದ ಆಟೋ ಉದ್ಯಮ ಗಣನೀಯ ಲಾಭ ಪಡೆದಿದ್ದು, ವಾಹನ ರದ್ದತಿ ನೀತಿಯ ಯಶಸ್ವಿ ಅನುಷ್ಠಾನದಿಂದ ಆಟೋಮೊಬೈಲ್ ಘಟಕಗಳ ವೆಚ್ಚ ಶೇ. 25ರಷ್ಟು ಕಡಿಮೆಯಾಗಿದೆ. ಇದರಿಂದ ವಾಹನ ಮಾರುಕಟ್ಟೆ ಸಾಮರ್ಥ್ಯ, ಬೇಡಿಕೆ ಹೆಚ್ಚಲಿದೆ, ಉದ್ಯಮದ ಗಾತ್ರ ಜಾಸ್ತಿಯಾಗಲಿದೆ ಎಂದರು. ಸ್ವಯಂಪ್ರೇರಿತ ವಾಹನ ಆಧುನೀಕರಣ ಕಾರ್ಯಕ್ರಮ ಅಥವಾ ವಾಹನ ರದ್ದತಿ ನೀತಿಯನ್ನು ಸರ್ಕಾರ ಜಾರಿಗೊಳಿಸಿದ್ದು, ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಹಂತಹಂತವಾಗಿ ತೆಗೆದು ಹಾಕಲು ವ್ಯವಸ್ಥೆಯನ್ನು ರೂಪಿಸಿದೆ. ಮೋಟಾರು ವಾಹನ ನಿಯಮಗಳ ಪ್ರಕಾರ, ವಾಣಿಜ್ಯ ವಾಹನಗಳಿಗೆ 8 ವರ್ಷಗಳವರೆಗೆ ಪ್ರತಿ 2 ವರ್ಷಕ್ಕೊಮ್ಮೆ ಮತ್ತು ನಂತರ ಪ್ರತಿ ವರ್ಷ ಫಿಟ್​ನೆಸ್ ಪರೀಕ್ಷೆ ಕಡ್ಡಾಯ. ಖಾಸಗಿ ವಾಹನಗಳು ಈ ಪರೀಕ್ಷೆಯನ್ನು ನೋಂದಣಿ ನವೀಕರಣದ ಸಮಯದಲ್ಲಿ; ಐದು ವರ್ಷಗಳಿಗೊಮ್ಮೆ ಮಾಡಿಸಬೇಕು. ಸರ್ಕಾರಿ ವಾಹನಗಳಿಗೆ 15 ವರ್ಷಗಳ ನಂತರ ಬಳಕೆ ಅವಧಿ ಮುಗಿಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net