ಬೆಂಗಳೂರಲ್ಲಿ ಹರಿದಾಡುತ್ತಿವೆ ನಿಷೇಧಿತ ನೋಟುಗಳು, ಎರಡೇ ದಿನದಲ್ಲಿ 1.26 ಕೋಟಿ ರೂ. ಜಪ್ತಿ

note ban
Published on

ಬೆಂಗಳೂರು: ಮೊನ್ನೆ(ಜು.28) ಜಾಲಹಳ್ಳಿ ಪೊಲೀಸರು ಎಚ್​ಎಂಟಿ ಸವಿರ್ಸ್​ ರಸ್ತೆಯಲ್ಲಿ 30 ಲಕ್ಷ ರೂ. ಮೌಲ್ಯದ ನಿಷೇಧಿತ 1 ಸಾವಿರ ರೂ. ಮುಖಬೆಲೆಯ ನೋಟುಗಳು ಜಪ್ತಿ ಮಾಡಿದ ಬೆನ್ನಲ್ಲೇ, ಯಶವಂತಪುರ ಪೊಲೀಸರು ನಿಷೇಧಿತ ಒಂದು ಸಾವಿರ ಮತ್ತು ಐನೂರು ರೂ. ಮುಖಬೆಲೆಯ 96 ಲಕ್ಷ ರೂ. ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಶೇ.20 ಕಮೀಷನ್​ ಆಸೆಗಾಗಿ ಕೇರಳ ಮೂಲದ ವ್ಯಕ್ತಿಗಳಿಬ್ಬರ ಸೂಚನೆ ಮೇರೆಗೆ ಕೊಡಗಿನ ನಾಲ್ವರು ಹಳೇ ನೋಟುಗಳ ಸಮೇತ ಯಶವಂತಪುರ ಆರ್​ಟಿಒ ಕಚೇರಿ ಬಳಿ ಕಾರಿನಲ್ಲಿ ಕುಳಿತು ಚಲಾವಣೆಗೆ ಯತ್ನಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಕೊಡಗು ಮೂಲದ ದಿನೇಶ್​(39), ರಾಸಿಕ್(25), ನಾಗರಾಜ್​(48) ಮತ್ತು ಕೃಷ್ಣಮೂರ್ತಿ(36) ಎಂಬುವವರನ್ನು ಬಂಧಿಸಿ, ಅವರ ಬಳಿಯಿದ್ದ 96 ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ನಿಷೇಧಿತ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಯಶವಂತಪುರ ಠಾಣಾಧಿಕಾರಿ ಮೊಹಮದ್​ ಮುಕ್ರಂ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಉತ್ತರ ವಿಭಾಗದ ಡಿಸಿಪಿ ಎನ್​.ಶಶಿಕುಮಾರ್​ ತಿಳಿಸಿದ್ದಾರೆ.

ದೇಶದಲ್ಲಿ 1 ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ನೋಟು ಬ್ಯಾನ್​ ಆಗಿ ಮೂರು ವರ್ಷ ಕಳೆದರೂ ಹಳೆಯ ನೋಟುಗಳ ಚಲಾವಣೆ ದಂಧೆ ರಾಜ್ಯ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net