ರಾಜ್ಯಾದ್ಯಂತ 942 ಆ್ಯಕ್ಸಿಡೆಂಟ್ ಬ್ಲ್ಯಾಕ್ ಸ್ಪಾಟ್‌ಗಳು: ಕಳೆದ ವರ್ಷ 11,324 ಮಂದಿ ಮೃತ- Accident Black Spots

ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ಪೋಲಿಸ್ ಇಲಾಖೆ ವತಿಯಿಂದ ರಾಜ್ಯಾದ್ಯಂತ ಒಟ್ಟು 942 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ರಾಜ್ಯದ ಇತರ ಜಿಲ್ಲೆಗಳಗಿಂತ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಹೆಚ್ಚಿವೆ. 942 ಬ್ಲ್ಯಾಕ್ ಸ್ಪಾಟ್‌ಗಳ ಪೈಕಿ 459 ಸ್ಥಳಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ವಹಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿವೆ.
ಅಪಘಾತ ಹೆಚ್ಚಳ
ರಾಜ್ಯದಲ್ಲಿವೆ 942 ಆ್ಯಕ್ಸಿಡೆಂಡ್ ಬ್ಲ್ಯಾಕ್​ಸ್ಪಾಟ್​​ಗಳು
Published on: 

ಬೆಂಗಳೂರು: (942 Accident Black Spots) ತೀವ್ರ ತಿರುವುಗಳು, ರಸ್ತೆ ಗುಂಡಿಗಳು, ಅವೈಜ್ಞಾನಿಕ ರಸ್ತೆ ವಿನ್ಯಾಸ, ವೇಗದ ಚಾಲನೆ ಮತ್ತು ಪಾದಚಾರಿ ಮಾರ್ಗಗಳ ಕೊರತೆ ಸೇರಿ ಇತರ ಕಾರಣಗಳಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ರಾಜ್ಯಾದ್ಯಂತ ವರದಿಯಾಗಿರುವ ಒಟ್ಟು ಅಪಘಾತ ವಲಯಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಅಪಘಾತಗಳು ಕಪ್ಪು ಸ್ಥಳಗಳಲ್ಲಿ ( ಬ್ಲ್ಯಾಕ್ ಸ್ಪಾಟ್) ಸಂಭವಿಸುತ್ತಿರುವುದು ಆತಂಕ ತಂದೊಡ್ಡಿದೆ.

ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ಪೋಲಿಸ್ ಇಲಾಖೆ ವತಿಯಿಂದ ರಾಜ್ಯಾದ್ಯಂತ ಒಟ್ಟು 942 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ರಾಜ್ಯದ ಇತರ ಜಿಲ್ಲೆಗಳಗಿಂತ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಹೆಚ್ಚಿವೆ. 942 ಬ್ಲ್ಯಾಕ್ ಸ್ಪಾಟ್‌ಗಳ ಪೈಕಿ 459 ಸ್ಥಳಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ವಹಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿವೆ.

2025ರಲ್ಲಿ ರಾಜ್ಯಾದ್ಯಂತ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 11,324 ಮಂದಿ ಜೀವ ಕಳೆದುಕೊಂಡಿದ್ದರೆ, 53,938 ಜನರು ಗಾಯಗೊಂಡಿದ್ದಾರೆ. ಪ್ರತಿನಿತ್ಯ ಸರಾಸರಿ 31 ಸಾವು, 147 ಗಾಯಗಳು ಸಂಭವಿಸುತ್ತಿವೆ. ಐದು ವರ್ಷಗಳಲ್ಲಿ ರಾಜ್ಯದಲ್ಲಿ 2.4 ಲಕ್ಷಕ್ಕೂ ಅಧಿಕ ಅಪಘಾತಗಳಲ್ಲಿ 66,791 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 2.9 ಲಕ್ಷ ಜನರಿಗೆ ಗಾಯಗಳಾಗಿವೆ. 2022-24ರ ಅವಧಿಯಲ್ಲಿ ರಾಜ್ಯ ಪೊಲೀಸರು ಗುರುತಿಸಿದ ಟಾಪ್ 10 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಒಂಬತ್ತು ಸ್ಥಳಗಳು ದಕ್ಷಿಣ ಕರ್ನಾಟಕದಲ್ಲಿವೆ. ಇದರಲ್ಲಿ ಮೂರು ಬೆಂಗಳೂರಿನಲ್ಲೇ ಇರುವುದು ಗಮನಾರ್ಹ. ಪೀಣ್ಯ ಪ್ರದೇಶದ 8ನೇ ಮೈಲಿ ಜಂಕ್ಷನ್‌ನಿಂದ ನಾಗಸಂದ್ರ ಟೋಲ್​​ವರೆಗಿನ ರಸ್ತೆ, ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ನಿಡಘಟ್ಟ ಪ್ರದೇಶ ಹಾಗೂ ವಿಜಯಪುರ ಜಿಲ್ಲೆಯ ಎನ್‌ಎಚ್-52 ರಸ್ತೆಯಲ್ಲಿ ಅಧಿಕ ಅಪಘಾತಗಳು ಸಂಭವಿಸುತ್ತಿವೆ.

Also Read
25ಕ್ಕೆ ಚಂಡಮಾರುತ ಸಾಧ್ಯತೆ: ವಾರಾಂತ್ಯಕ್ಕೆ ರಾಜ್ಯದಲ್ಲಿ ಮಳೆ ಬಿರುಸು- Cyclone
ಅಪಘಾತ ಹೆಚ್ಚಳ

ಬೆಂಗಳೂರಿನಲ್ಲಿ 27ಕ್ಕೂ ಅಧಿಕ ಬ್ಲ್ಯಾಕ್ ಸ್ಪಾಟ್:

ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯಲ್ಲೇ 27ಕ್ಕೂ ಅಧಿಕ ಬ್ಲ್ಯಾಕ್ ಸ್ಪಾಟ್‌ಗಳಿವೆ. ಬೆಂಗಳೂರು ಸಂಚಾರ ಪೊಲೀಸರು 2023ರಿಂದ 2025ರವರೆಗೆ 64 ಅಪಘಾತ ಬ್ಲ್ಯಾಕ್ ಸ್ಪಾಟ್ ಗುರುತಿಸಿದ್ದಾರೆ. ಬೆಂಗಳೂರು-ಬಳ್ಳಾರಿ ರಸ್ತೆಯ (ಎನ್‌ಎಚ್ 44) ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯು (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆ) ಅತ್ಯಧಿಕ ಅಂದರೆ 5 ಬ್ಲ್ಯಾಕ್ ಸ್ಪಾಟ್‌ಗಳನ್ನು ಹೊಂದಿದೆ. ಹುಣಸಮಾರನಹಳ್ಳಿ, ಎಂವಿಐಟಿ, ಬೆಟ್ಟಹಲಸೂರು, ಮೀನುಕುಂಟೆ ಹೊಸೂರು ಮತ್ತು ಸಾದಹಳ್ಳಿ ಗೇಟ್ ಜಂಕ್ಷನ್‌ಗಳಲ್ಲಿ ತಲಾ 15ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಇದಕ್ಕೆ ಅತಿವೇಗ, ರಸ್ತೆ ದಾಟುವಾಗ ಎಚ್ಚರಿಕೆ ವಹಿಸದಿರುವುದು ಪ್ರಮುಖ ಕಾರಣ. ಯಲಹಂಕ, ಎಲೆಕ್ಟ್ರಾನಿಕ್ಸ್ ಸಿಟಿ,ಕೆಂಗೇರಿಯಲ್ಲಿ ತಲಾ 4 ಮತ್ತು ಜೆ.ಬಿ.ನಗರ, ಮಹಾಲಕ್ಷ್ಮಿಪುರಂ ಮುಂತಾದ ಕಡೆಗಳಲ್ಲಿ ತಲಾ 3 ಬ್ಲಾಕ್‌ಸ್ಪಾಟ್‌ಗಳಿವೆ.

ಬ್ಲ್ಯಾಕ್ ಸ್ಪಾಟ್‌ಎಂದರೇನು?

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿಗಳ ಪ್ರಕಾರ, ಯಾವುದೇ 500 ಮೀಟರ್ ರಸ್ತೆ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಲ್ಲಿ 5 ಕ್ಕೂ ಅಧಿಕ ಮಾರಣಾಂತಿಕ ಅಥವಾ ಘೋರ ಅಪಘಾತಗಳು ನಡೆದ್ದರೆ ಅಥವಾ 10ಕ್ಕೂ ಅಧಿಕ ಜನರು ಜೀವ ಕಳೆದುಕೊಂಡಿದ್ದರೆ ಅಂತಹ ಜಾಗವನ್ನು ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ. ಈ ಸ್ಥಳಗಳಲ್ಲಿ ಅಪಘಾತ ತಡೆಗೆ ಲೋಕೋಪಯೋಗಿ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಗಾರ್ಡ್‌ರೈಲ್ಸ್ ಅಳವಡಿಕೆ, ಸೈನ್ ಬೋರ್ಡ್‌ಗಳು, ರಸ್ತೆ ದುರಸ್ತಿಯಂತಹ ಕ್ರಮ ತೆಗೆದುಕೊಳ್ಳಬೇಕಿದೆ.

ಅಪಘಾತಕ್ಕೆ ಕಾರಣಗಳೇನು?

* ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದಷ್ಟು ವೇಗವಾಗಿ ಚಾಲನೆ

* ಮದ್ಯ ಅಥವಾ ಮಾದಕ ವಸ್ತು ಸೇವಿಸಿ ವಾಹನ ಓಡಿಸುವುದು

* ಮೊಬೈಲ್ ಬಳಸುವುದು ಅಥವಾ ಇತರೆಡೆ ಗಮನ ಹರಿಸುವುದು

* ಸಿಗ್ನಲ್ ಜಂಪ್ ಮಾಡುವುದು, ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಧರಿಸದಿರುವುದು

* ಬ್ರೇಕ್ ವೈಫಲ್ಯ, ಟೈರ್ ಪಂಕ್ಚರ್, ವಾಹನಗಳಲ್ಲಿ ಮಿತಿಮೀರಿದ ಸರಕು ಸಾಗಣೆ

* ಗುಂಡಿಗಳು, ಕಳಪೆ ರಸ್ತೆ ವಿನ್ಯಾಸ, ಬೆಳಕಿನ ಕೊರತೆ.

* ರಸ್ತೆ ದಾಟುವಾಗ ಪಾದಚಾರಿಗಳು ಎಚ್ಚರಿಕೆ ವಹಿಸದಿರುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net