ವಸತಿ ಶಾಲೆಗಳ 92 ಮಕ್ಕಳು ಸಾವು!; ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ಗಳ ಬಣ್ಣ ಬಯಲು

Hostel
Published on

ಬೆಳಗಾವಿ: ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಕ್ರೖೆಸ್ ವಸತಿ ಶಾಲೆಗಳ ಹುಳುಕುಗಳನ್ನು ಬಿಚ್ಚಿಟ್ಟಿದ್ದು, ನ್ಯೂನತೆ ಸರಿಪಡಿಸಲು ಹಣಕಾಸು ಕೊರತೆ ಇರುವುದನ್ನು ಪತ್ತೆ ಹಚ್ಚಿದ್ದಲ್ಲದೆ ಅಚ್ಚರಿ ಸಂಗತಿಗಳೂ ಒಳಗೊಂಡಿದೆ. ಕಳೆದ ಐದು ವರ್ಷಗಳಲ್ಲಿ ವಸತಿ ಶಾಲೆಗಳಲ್ಲಿರುವ ಸುಮಾರು 92 ಮಕ್ಕಳು ಮೃತಪಟ್ಟಿದ್ದು, ಈ ಪೈಕಿ 29 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದಲ್ಲದೆ, ಮನೆಗೆ ಹೋಗುವ ದಾರಿಯಲ್ಲಿಯೂ ಸಾವಿಗೀಡಾಗಿದ್ದಾರೆ ಎಂಬ ಅಂಶ ವರದಿಯಲ್ಲಿ ಮುಖ್ಯವಾಗಿ ಕಾಣಿಸುತ್ತಿದೆ.

ಸಾವಿಗೆ ಸಂಬಂಧಿಸಿದಂತೆ ನಾಗರಿಕ ಹಕ್ಕು ನಿರ್ದೇಶನಾಲಯದಿಂದ ಸಮಗ್ರ ತನಿಖೆಯಾಗಿದೆಯೇ ಎಂದು ಪಾಲಕರಿಂದ ಅಭಿಪ್ರಾಯ ಸಂಗ್ರಹಿಸಿ, ಕಾನೂನು ಕ್ರಮವಹಿಸುವಂತೆ ಮತ್ತು ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಇಲಾಖಾ ಹಂತದಲ್ಲಿ ಕೌನ್ಸೆಲಿಂಗ್ ಮಾಡಿಸಲು ಸಮಿತಿ ಸೂಚನೆ ನೀಡಿದೆ.

ಪ್ರಮುಖ ಸಂಗತಿಗಳು

  • ಕ್ರೖೆಸ್ ಶಾಲೆಗಳಲ್ಲಿ ಆರ್ಟ್, ಮ್ಯೂಸಿಕ್, ಕಂಪ್ಯೂಟರ್ ಸೈನ್ಸ್​ಗೆ ಪಠ್ಯಕ್ರಮ ಇಲ್ಲವಾಗಿದೆ. ಜತೆಗೆ ಶಿಕ್ಷಕರೂ ಇಲ್ಲ. ಪ್ರಸ್ತುತ ಕಂಪ್ಯೂಟರ್ ಶಿಕ್ಷಣಕ್ಕೆ 11,174 ಕಂಪ್ಯೂಟರ್ ಅವಶ್ಯಕತೆ ಇದೆ. 155 ಶಾಲೆಗಳಿಗೆ ಇಂಟರ್​ನೆಟ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ.
  • 10ನೇ ತರಗತಿವರೆಗೂ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ಹಲವು ಶಾಲೆಗಳಲ್ಲಿ ಕಂಪ್ಯೂಟರ್​ಗಳು ಮತ್ತು ಶಿಕ್ಷಕರೂ ಇಲ್ಲ.
  • 209 ವಸತಿ ಶಾಲೆಗಳ ಪೈಕಿ 93ರಲ್ಲಿ ಮಹಿಳಾ ವಾರ್ಡನ್​ಗಳೇ ಇಲ್ಲ. ಒಬ್ಬೊಬ್ಬರಿಗೆ ಎರಡು ಮೂರು ವಸತಿ ಶಾಲೆ ಅಧಿಕ ಪ್ರಭಾರ ವಹಿಸ ಲಾಗಿದೆ. ಇದರಿಂದ ಹೆಣ್ಣು ಮಕ್ಕಳ ರಕ್ಷಣೆಗೂ ತೊಂದರೆಯಾಗುತ್ತಿದೆ.
  • ಹಲವಾರು ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಮೂಲಸೌಲಭ್ಯ ಕೊರತೆ ತೀವ್ರವಾಗಿದೆ. ಗುಣಮಟ್ಟ ಪರಿಶೀಲನೆಗೆ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿಯನ್ನೂ ನೀಡಿಲ್ಲ.
  • ಬಹಳಷ್ಟು ಕಡೆಗಳಲ್ಲಿ ಆಹಾರದ ಟೆಂಡರ್ ಆದ ನಂತರ ಗುತ್ತಿಗೆದಾರರು ಸರಬರಾಜು ಮಾಡಲು ನೀಡುವ ಮಾದರಿಗಳಿಗೂ ಮತ್ತು ಸರಬರಾಜು ಮಾಡುವ ಆಹಾರ ಪದಾರ್ಥಗಳಿಗೂ ವ್ಯತ್ಯಾಸವಿರುವುದು ಗಮನಕ್ಕೆ ಬಂದಿದೆ. ಒಂದು ಪ್ರಕರಣದಲ್ಲಿ ಆಹಾರ ಪದಾರ್ಥ ಪರಿಶೀಲಿಸಿದಾಗ ಪ್ಲಾಸ್ಟಿಕ್ ಫೋಮ್ ಇದ್ದುದ್ದು ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳಲ್ಲಿ ಅತ್ಯಂತ ಪ್ರಭಾವಿಗಳ ಕೈವಾಡ ಗಮನಿಸಲಾಗಿದೆ.
  • ಕ್ರೖೆಸ್ ಸಂಸ್ಥೆಗೆ ಸಂಬಂಧಿಸಿದ ಎಲ್ಲವೂ ಕೇಂದ್ರ ಕಚೇರಿಯಿಂದ ಆಡಳಿತ ಮಾಡುತ್ತಿದ್ದು, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ನಿಯಂತ್ರಿಸಲು ಅಧಿಕಾರಿಗಳು ಇಲ್ಲ.
  • ಈ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ವಿಭಾಗ ಇಲ್ಲದಿರುವ ಕಾರಣ ಸಂಸ್ಥೆಯಿಂದ ನಿರ್ವಣವಾಗುತ್ತಿರುವ ಹಲವಾರು ಕಾಮಗಾರಿಗಳು ತಪು್ಪ, ಅಂದಾಜು ಪಟ್ಟಿ ಸಲ್ಲಿಸಿರುವುದರಿಂದ ಸುಮಾರು ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಅಪೂರ್ಣವಾಗಿವೆ.
  • ವಸತಿ ನಿಲಯಕ್ಕೆ ಬಾಡಿಕೆ ನೀಡಲು ಯಾರೂ ಆಸಕ್ತಿ ತೋರುತ್ತಿಲ್ಲ. ಕಾರಣ, ಬಾಡಿಗೆ ಒಂದು ವರ್ಷದ ನಂತರ ಕಟ್ಟಡ ಮಾಲೀಕರಿಗೆ ನೀಡಲಾಗುತ್ತಿದೆ.
  • ಕೆಲವು ವಿದ್ಯಾರ್ಥಿ ನಿಲಯಗಳಿಗೆ ಕಟ್ಟಡಗಳಿಲ್ಲ, ಹೆಚ್ಚುವರಿಯಾಗಿ ಮಕ್ಕಳನ್ನು ಹಾಸ್ಟೆಲ್​ಗಳಲ್ಲಿ ಸೇರಿಸಿಕೊಂಡಿರುವುದರಿಂದ ಮೂಲಸೌಕರ್ಯಗಳಿಲ್ಲ.

ನೆಲದ ಮೇಲೆ ಮಲಗಲೂ ಇಕ್ಕಟ್ಟು!: ಎಸ್ಸಿ ಎಸ್ಟಿ, ಹಿಂದುಳಿದ ಸಮುದಾಯಗಳ ಕೆಲವು ವಿದ್ಯಾರ್ಥಿನಿಲಯಗಳಲ್ಲಿ ಈಗಲೂ ಸರಿಯಾಗಿ ಹಾಸಿಗೆ, ಮಂಚಗಳಿಲ್ಲದೆ ಒಬ್ಬರು ಮಲಗುವ ಸ್ಥಳಗಳಲ್ಲಿ ಇಬ್ಬರು ಮಲಗುವ ಪರಿಸ್ಥಿತಿ ಆಗಿದೆ. ವಿದ್ಯಾರ್ಥಿನಿಯರ ಹಾಸ್ಟೆಲ್​ಗಳಲ್ಲೂ ಇದೇ ಪರಿಸ್ಥಿತಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 100 ಮಕ್ಕಳು ಇರುವ ಕಡೆ 40 ಮಕ್ಕಳಿದ್ದು ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಮೂಲಸೌಕರ್ಯಗಳಿಗಾಗಿ ಇರುವ ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ತಿರಸ್ಕೃತವಾಗುತ್ತಿದೆ ಎಂಬ ಗಂಭೀರ ಅಂಶವೂ ಪ್ರಸ್ತಾಪಿಸಲಾಗಿದೆ.

ಅಸಮಾಧಾನ: ಕ್ರೖೆಸ್ತ ಸಂಸ್ಥೆಗಳಲ್ಲಿ ಇಂಜಿನಿಯರ್​ಗಳ ಕೊರತೆ ಇದ್ದರೂ ಸಾವಿರಾರು ಕೋಟಿ ರೂ. ಕಾಮಗಾರಿ ಕೈಗೊಂಡಿ ರುವುದಕ್ಕೆ ಸಮಿತಿ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದೆ. ಶಾಶ್ವತ ಇಂಜಿನಿ ಯರಿಂಗ್ ವಿಭಾಗ ಮಾಡಿ ಕ್ರಮ ಕೈಗೊಳ್ಳಲು ಸಮಿತಿ ಸೂಚನೆ ನಡೆದಿದೆ.

ಇತರ ಸಲಹೆಗಳು: ಹೊರಗುತ್ತಿಗೆ ನೇಮಕ ಸಂದರ್ಭದಲ್ಲಿ ಮೀಸಲಾತಿ ಪರಿಗಣಿಸುತ್ತಿಲ್ಲವಾದ್ದರಿಂದ ಪರಿಶಿಷ್ಟ ಜಾತಿ, ಪಂಗಡದವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಕಾಯ್ದೆ ರೂಪಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದೆ. ಅದೇ ರೀತಿ ಬ್ಯಾಕ್​ಲಾಗ್ ಹುದ್ದೆ ಭರ್ತಿ ಮಾಡದಿದ್ದರೆ ಕಾನೂನು ಕ್ರಮಕೈಗೊಳ್ಳಲು ನಿರ್ದಿಷ್ಟ ಕಾನೂನು ರೂಪಿಸುವುದು, ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಿಎಲ್-2, 7, 9, 11 ಪರವಾನಗಿ ನೀಡುವಾಗಿ ಮೀಸಲಾತಿ ದೊರಕಿಸಬೇಕೆಂದೂ ಶಿಫಾರಸು ಮಾಡಲಾಗಿದೆ.

ಊಟ ಕೇಳಿದ್ರೆ ಹೊಡೆಯುತ್ತಿದ್ದ ವಾರ್ಡನ್

ರಾಣೆಬೆನ್ನೂರ: ಅರೆ ಹೊಟ್ಟೆ ಊಟ ಕೊಡುತ್ತಿದ್ದಾರೆ. ಇನ್ನೂ ಸ್ವಲ್ಪ ಬೇಕು ಎಂದರೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆ ಎಂದು ಮಕ್ಕಳು ಮಂಗಳವಾರ ಪ್ರತಿಭಟನೆ ನಡೆಸಿದ್ದ ನಗರದ ಹಳೆಯ ಪಿ.ಬಿ. ರಸ್ತೆಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿಯುತ ಪೂರ್ವ ಪ್ರಾಥಮಿಕ ಶಾಲೆಯ ವಾರ್ಡನ್ ಎತ್ತಂಗಡಿಯಾಗಿದೆ. ಬುಧವಾರ ಶಾಲೆಗೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರೇಷ್ಮಾ ಕೌಸರ ಅವರು ವಾರ್ಡನ್ ಸವಿತಾ ಬಣಕಾರಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ಕೂಡಲೇ ಹಾವೇರಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ, ಮಕ್ಕಳೊಂದಿಗೆ ಈ ರೀತಿ ನಡೆದುಕೊಂಡವರನ್ನು ವರ್ಗಾವಣೆ ಮಾಡಿದರೆ ಸಾಲದು, ಅಮಾನತು ಮಾಡಬೇಕು. ಮಕ್ಕಳಿಗೆ ಹಿಂಸೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂಬುದು ಪಾಲಕರ ಆಗ್ರಹವಾಗಿದೆ.

ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗಿನ 125 ಮಕ್ಕಳಿದ್ದಾರೆ. ಆಟವಾಡುವಾಗ ಬಿದ್ದು ಗಾಯವಾದರೆ, ಜ್ವರ, ನೆಗಡಿ ಬಂದರೆ ಕೇರ್ ಮಾಡುವವರಿಲ್ಲ. ಇತ್ತೀಚೆಗೆ ವಾರ್ಡನ್ ಬದಲಾವಣೆಯಾದ ಬಳಿಕ ಕಡಿಮೆ ಅಡುಗೆ ಮಾಡಿ ಅಲ್ಪಸ್ವಲ್ಪ ಊಟ-ಉಪಹಾರ ನೀಡುತ್ತಿದ್ದಾರೆ ಎಂದು ಮಕ್ಕಳು ಆರೋಪಿಸಿದ್ದರು.

ಮಕ್ಕಳ ರಕ್ಷಣಾಧಿಕಾರಿ ಭೇಟಿ: ವಸತಿ ಶಾಲೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಣ್ಣಪ್ಪ ಹೆಗಡೆ ಬುಧವಾರ ಭೇಟಿ ನೀಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ಮಾಹಿತಿ ಪಡೆದುಕೊಂಡರು. ಮಕ್ಕಳೊಂದಿಗೆ ಮಾತನಾಡಿ ಅಹವಾಲು ಆಲಿಸಿ, ಸಿಸಿ ಕ್ಯಾಮರಾ ಪರಿಶೀಲಿಸಿದರು.

100 ಹಾಸ್ಟೆಲ್ ನಿರ್ವಣಕ್ಕೆ ಪ್ರಸ್ತಾವನೆ: ಹಿಂದುಳಿದ ವರ್ಗಗಳ ವಸತಿ ನಿಯಲಗಳಲ್ಲಿ ಪ್ರವೇಶ ಮಿತಿ, ಅಲ್ಲಿನ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಗಮನ ಸೆಳೆದರು.

ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಗ್ರಾಮೀಣ ವಿದ್ಯಾರ್ಥಿಗಳು ಉಡುಪಿ ಮತ್ತು ಕುಂದಾಪುರಕ್ಕೆ ಶಿಕ್ಷಣ ಪಡೆಯಲು ಬರುತ್ತಿರುವುದರಿಂದ ವಸತಿ ನಿಲಯಗಳಲ್ಲಿ ಪ್ರವೇಶ ಸಿಗದೆ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಕೂಡ ದನಿಗೂಡಿಸಿದರು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ವಿದ್ಯಾರ್ಥಿಗಳ ಪ್ರವೇಶಾತಿ ತಡವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಆಡಳಿತ ಪಕ್ಷದ ಕೆಲ ಶಾಸಕರೂ ಸಮಸ್ಯೆ ವಿವರಿಸಿದರು. ಉತ್ತರ ನೀಡಿದ ಸಚಿವ ಶಿವರಾಜ ತಂಗಡಗಿ, ಮಂಗಳೂರು, ಬೆಳಗಾವಿ, ಧಾರವಾಡ ಸೇರಿ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಹಾಸ್ಟೆಲ್ ಕೊರತೆ ಇದೆ. 100 ಹಾಸ್ಟೆಲ್ ಆರಂಭಿಸಲು ಅವಕಾಶ ಕೊಡಿ ಎಂದು ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ಶೇ.75ಕ್ಕೆ ಮೀಸಲು ಮಿತಿ ಹೆಚ್ಚಿಸಿ: ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಅದೇ ತಾಲೂಕಿನ ಮೂಲ ವಿದ್ಯಾರ್ಥಿಗಳಿಗೆ ಶೇ.60 ಮೀಸಲಾತಿ ನೀಡಲು ಸರ್ಕಾರ ಆದೇಶ ಹೊರಡಿಸಿದ್ದು, ಈ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸಬೇಕೆಂದು ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಪರಿಶೀಲಿಸುವುದಾಗಿ ತಿಳಿಸಿದರು. ಬುದ್ಧಿವಂತರಿಗೆ ಮಾತ್ರ ಪ್ರವೇಶ ನೀಡಬಾರದು, ಬಡವರಿಗೆ ಅವಕಾಶ ಕೊಡಬೇಕು. ಶಾಸಕರಿಗೆ ಈ ಜವಾಬ್ದಾರಿ ನೀಡಿ ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net