

ಡೆಹ್ರಾಡೂನ್: ಮಹಾಮಾರಿ ಕರೊನಾ ವೈರಸ್ ಪುಟ್ಟ ಮಕ್ಕಳನ್ನು, ನವಜಾತ ಶಿಶುಗಳನ್ನೂ ಬಿಡದ ಹಾಗೆ ಕಾಡುತ್ತಿದೆ. ಸದ್ಯ ಉತ್ತರಾಖಂಡದಲ್ಲಿ 9 ತಿಂಗಳ ಮಗುವಿನಲ್ಲಿ ಕರೊನಾ ಕಾಣಿಸಿಕೊಂಡಿದ್ದು, ಅದು ರಾಜ್ಯದಲ್ಲೇ ಅತ್ಯಂತ ಕಿರಿಯ ಕರೊನಾ ರೋಗಿ ಎನ್ನಲಾಗಿದೆ.
ಈ ಮಗುವಿಗೆ ಕರೊನಾ ವೈರಸ್ ತಗುಲಿದ್ದು ಅದರ ತಂದೆಯಿಂದ. ಆತ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆ ಸಮಾವೇಶ ಎಲ್ಲಿ ನಡೆದಿತ್ತು ಎಂಬುದನ್ನು ಬಹಿರಂಗಪಡಿಸಿಲ್ಲ. ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ವಾಪಸ್ ಆಗಿದ್ದ ವ್ಯಕ್ತಿಯಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಅದೀಗ ಮಗುವಿಗೂ ತಗುಲಿದೆ.
ಮಗುವಿನ ತಾಯಿಗೆ ಕೊವಿಡ್ ಸೋಂಕು ತಗುಲಿಲ್ಲ. ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ನೆಗೆಟಿವ್ ಎಂದು ವರದಿ ಬಂದಿದ್ದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಉತ್ತರಾಖಂಡದಲ್ಲಿ ಒಟ್ಟು ಮೂರು ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್)