867 ರೂ. ಸೂಟ್‌ಗೆ 1.49 ಲಕ್ಷ ಕಳೆದುಕೊಂಡ ಶಿಕ್ಷಕಿ

cyber
Published on

ಬೆಂಗಳೂರು: ಆನ್‌ಲೈನ್ ಶಾಪಿಂಗ್‌ನಲ್ಲಿ 867 ರೂ. ಬೆಲೆಯ ಸೂಟ್ ಖರೀದಿಸಿದ ಶಿಕ್ಷಕಿ, ಕಳಪೆ ಎಂದು ವಾಪಸ್ ನೀಡಲು ಗೂಗಲ್‌ನಲ್ಲಿ ಸಿಕ್ಕ ಹೆಲ್ಪ್‌ಲೈನ್‌ಗೆ ಕರೆ ಮಾಡಿ 1.49 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ.

ಹೆಬ್ಬಾಳದ ಕೇಂದ್ರೀಯ ವಿದ್ಯಾನಿಲಯದ ಶಿಕ್ಷಕಿ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಸದಾಶಿವನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಾರ್ಚ್ 28ರಂದು ಆನ್‌ಲೈನ್ ಶಾಪಿಂಗ್‌ನಲ್ಲಿ 867 ರೂ. ಬೆಲೆಯ ಸೂಟ್ ಬುಕ್ ಮಾಡಿ ಡೆಬಿಟ್ ಕಾರ್ಡ್‌ನಲ್ಲಿ ಹಣ ಪಾವತಿ ಮಾಡಿದ್ದು, ಏಪ್ರಿಲ್ 5ಕ್ಕೆ ಸೂಟ್ ಕೈ ಸೇರಿತ್ತು. ಆದರೆ, ಸೂಟ್ ಗುಣಮಟ್ಟ ನಿರೀಕ್ಷೆಯಂತೆ ಇರಲಿಲ್ಲ ಎಂಬ ಕಾರಣಕ್ಕೆ ಹಿಂತಿರುಗಿಸಲು ಸಂಬಂಧಪಟ್ಟ ಕಂಪನಿಗೆ ಇಮೇಲ್‌ನಲ್ಲಿ ದೂರು ಸಲ್ಲಿಸಿದ್ದರು. ಅದೇ ರೀತಿಯಾಗಿ ಗೂಗಲ್‌ನಲ್ಲಿ ಸಿಕ್ಕ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕೃತವಾಗಿಲ್ಲ.

ಸ್ವಲ್ಪ ಹೊತ್ತಿನ ಬಳಿಕ ಅದೇ ನಂಬರ್‌ನಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಹಣ ರೀಂಡ್ ಮಾಡುವುದಾಗಿ ನಂಬಿಸಿ ಎಪಿಕೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾನೆ. ಅದರಂತೆ ಶಿಕ್ಷಕಿ, ಮೊಬೈಲ್‌ನಲ್ಲಿ ಆ್ಯಪ್‌ಡೌನ್ ಲೋಡ್ ಮಾಡಿಕೊಂಡು ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರ್ ನಮೂದಿಸಿ ಆನಂತರ ರೀಂಡ್ ಹಣವನ್ನು ನಮೂದಿಸಿ ಕೊನೆಯಲ್ಲಿ ಎಂ-ಪಿನ್ ಅನ್ನು ಅಪ್‌ಡೇಟ್ ಮಾಡಿದ್ದಾರೆ. ಆನಂತರ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ 24 ಗಂಟೆ ಒಳಗಾಗಿ ನಿಮ್ಮ ಹಣ ವಾಪಸ್ ಬರಲಿದೆ ಎಂದು ನಂಬಿಸಿದ್ದಾನೆ.

ಏಪ್ರಿಲ್ 11ರಂದು ಶಿಕ್ಷಕಿ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 1.49 ಲಕ್ಷ ರೂ. ಕಡಿತವಾಗಿರುವ ಸಂದೇಶ ಬಂದಿದೆ. ಎಚ್ಚೆತ್ತ ಶಿಕ್ಷಕಿ ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸೈಬರ್ ಸಹಾಯವಾಣಿ 1930 ನಂಬರ್‌ಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net