

ಚಿಕ್ಕಮಗಳೂರು: ಕೃಷಿ ಕೈಗಾರಿಕೆಗೆ ಸೇರಿದ ಆರ್ಥಿಕ ಕ್ಷೇತ್ರಕ್ಕೆ 6,792 ಕೋಟಿ ರೂ. ಒಳಗೊಂಡ ಶೇ.86ರಷ್ಟು ಪಾಲನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಇ.ಪ್ರತಾಪ್ ತಿಳಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ಬ್ಯಾಂಕರ್‌ಗಳು ಹಾಗೂ ಅಭಿವೃದ್ಧಿ ಇಲಾಖೆ-ಸಂಸ್ಥೆ ಪ್ರತಿನಿಧಿಗಳ 3ನೇ ತ್ರೈಮಾಸಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾದ್ಯಂತ ಹವಾಮಾನ, ಮಳೆ, ನೈಸರ್ಗಿಕ ಪರಿಸ್ಥಿತಿ ಅಧ್ಯಯನ ಮಾಡಿ ರೈತಾಪಿ ವರ್ಗ ಸೇರಿ ವಿವಿಧ ಸ್ಥರದ ಜನರನ್ನು, ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಸಮಾಲೋಚನೆ ನಂತರ ಮುಂಬರುವ ದಿನದ ಆರ್ಥಿಕ ವ್ಯವಹಾರಗಳನ್ನು ಗುರುತಿಸಲಾಗಿದೆ. ಈ ಬಾರಿಯೂ ಬೆಳೆಸಾಲ, ದೀರ್ಘಾವಧಿ ಸಾಲ ಸೇರಿ ಕೃಷಿ ಚಟುವಟಿಕೆಗಳಿಗೆ ಸಿಂಹಪಾಲು ಮೀಸಲಿಡಬಹುದು ಎಂದರು.
ಮುಂದಿನ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ನಡೆಸಬಹುದಾದ ಆರ್ಥಿಕ ಚಟುವಟಿಕೆಗಳನ್ನು ಗಮನಿಸಿ ಕೈಪಿಡಿಯನ್ನು ಪ್ರತಿವರ್ಷವೂ ನಬಾರ್ಡ್‌ನಿಂದ ಸಿದ್ಧಪಡಿಸುವ ಪರಿಪಾಠವಿದೆ. ಇದನ್ನು ಆಧರಿಸಿ ವಿವಿಧ ಕ್ಷೇತ್ರಗಳ ಆದ್ಯತಾ ವಲಯಗಳನ್ನು ಗುರುತಿಸಬಹುದು ಎಂದು ಹೇಳಿದರು.
ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಜಿಪಂ ಮುಖ್ಯಾಧಿಕಾರಿ ಕರಿಗೌಡ, ಆರ್ಥಿಕ ಅಭಿವೃದ್ಧಿಗೆ ಬ್ಯಾಂಕರ್‌ಗಳ ಕೊಡುಗೆ ಗಣನೀಯ. ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳ ಪಾತ್ರ ಪ್ರಮುಖ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಸಹಿತ ಸಾಲ ನೀಡುವ ಯೋಜನೆಗಳಿಗೆ ಸಂಬಂಧಿಸಿ ಬ್ಯಾಂಕ್ ಅಧಿಕಾರಿಗಳು ಸಕಾರಾತ್ಮಕವಾಗಿ ವರ್ತಿಸಬೇಕು ಎಂದು ತಿಳಿಸಿದರು.
ಬ್ಯಾಂಕರ್‌ಗಳು ವಿವಿಧ ಯೋಜನೆಗಳಡಿ ಬಂದ ಅರ್ಜಿಯನ್ನು ವಿಳಂಬ ಮಾಡದೆ ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಸಹಕಾರ ನೀಡುವ ಮೂಲಕ ಜಿಲ್ಲೆಯ ಆರ್ಥಿಕ ಏಳಿಗೆಗೆ ನೆರವಾಗಬೇಕು. ಮುಂದಿನ ವರ್ಷದಿಂದ ಜಿಲ್ಲೆಯ ವಿವಿಧೆಡೆ ಕೈಗೊಳ್ಳಬಹುದಾದ ಆರ್ಥಿಕ ಚಟುವಟಿಕೆಗಳನ್ನು ಗಮನಿಸಿ ಸಾಲ ವಿತರಿಸಲು ವಿಶೇಷವಾಗಿ ಬ್ಯಾಂಕ್‌ಗಳಿಗೆ ಹಾಗೂ ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳಿಗೆ ಪಿಎಲ್‌ಪಿ ಕೈಪಿಡಿ ಸಿದ್ಧಪಡಿಸಲಾಗಿದೆ ಎಂದರು.