

ಮುಂಬೈ: ಯಾವುದೇ ಕೆಲಸವಾಗಿರಲಿ ನಾವುಗಳು ಅದರಲ್ಲೇ ಖುಷಿ ಕಾಣಬೇಕು ಎಂದು ಹಿರಿಯರು ಹೇಳುತ್ತಾರೆ. ಹಾಗಾದಾಗ ಮಾತ್ರ ನಾವು ನಮ್ಮ ಕ್ಷೇತ್ರದಲ್ಲಿ ಯಶಸ್ಸು ಮತ್ತು ಜನಪ್ರಿಯತೆ ಕಾಣಲು ಸಾಧ್ಯ ಎಂಬ ಮಾತಿಗೆ ಮುಂಬೈ ಮೂಲದ ದೋಸೆ ತಯಾರಕ ಉತ್ತಮ ಉದಾಹರಣೆಯಾಗಿದ್ದಾರೆ.
ದಕ್ಷಿಣ ಭಾರತದ ಆಹಾರವಾದ ದೋಸೆಯನ್ನು ಮುಂಬೈ ಮೂಲದ ವ್ಯಕ್ತಿಯೊಬ್ಬ ವಿಶೇಷವಾಗಿ ಬಡಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಫೇಸ್ಬುಕ್ನಲ್ಲಿ ವೈರಲ್ ಆಗಿದ್ದು, ಬರೋಬ್ಬರಿ 84 ಮಿಲಿಯನ್ (8 ಕೋಟಿ 40 ಲಕ್ಷ) ವೀಕ್ಷಣೆಯನ್ನು ದಾಟಿ ಮುನ್ನುಗ್ಗುತ್ತಿದೆ.
ದಕ್ಷಿಣ ಮುಂಬೈನ ಮಂಗಳದಾಸ್ ಮಾರುಕಟ್ಟೆಯಲ್ಲಿರುವ ಶ್ರೀ ಬಾಲಾಜಿ ದೋಸೆ ಕೇಂದ್ರದ ದೋಸೆ ತಯಾರಕ ವಿನೂತನವಾಗಿ ಸರ್ವ್ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ದೋಸೆ ತಯಾರಿಸಿದ ಬಳಿಕ ಅದನ್ನು ನೇರವಾಗಿ ಗ್ರಾಹಕರ ಪ್ಲೇಟ್ಗೆ ಗಾಳಿಯಲ್ಲಿ ಹಾರಿಬಿಡುವ ಕೌಶಲ್ಯವನ್ನು ದೋಸೆ ತಯಾರಕ ಹೊಂದಿದ್ದಾನೆ.
ಸ್ಟ್ರೀಟ್ ಫುಡ್ ರೆಸಿಪೀಸ್ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ವಿಡಿಯೋ ಶೇರ್ ಮಾಡಲಾಗಿದ್ದು, "ಬಾಸ್ ರೀತಿಯಲ್ಲಿ ದೋಸೆ ಬಡಿಸುವುದು" ಎಂದು ವಿಡಿಯೋಗೆ ಅಡಿಬರಹವಿದೆ. ದೋಸೆ ತಯಾರಿಸಿ ಬಡಿಸುವ ರೀತಿ ನಿಜಕ್ಕೂ ಎಲ್ಲರ ಹುಬ್ಬೇರಿಸುತ್ತದೆ.
ಕಳೆದ ವಾರ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದಾಗಿನಿಂದ ಈವರೆಗೂ 84.4 ಮಿಲಿಯನ್ ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಅಲ್ಲದೆ, 1.3 ಮಿಲಿಯನ್ ಲೈಕ್ಸ್ ಸಹ ಗಿಟ್ಟಿಸಿಕೊಂಡಿದೆ. ಸಾವಿರಾರು ಮಂದಿ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದು, ದೋಸೆ ಬಡಿಸುವ ಪರಿಗೆ ಫಿದಾ ಆಗಿದ್ದಾರೆ.
ಕೆಲವರು ಅಸಮಾಧಾನವನ್ನು ಹೊರಹಾಕಿದ್ದು, ಆಹಾರದೊಂದಿಗೆ ಆಟವಾಡುವುದು ವ್ಯಾಪಾರದ ಕೆಟ್ಟ ಸಾಹಸ ಎಂದು ಟೀಕಿಸಿದ್ದಾರೆ. ನಿಮಗೆ ಏನನಿಸುತ್ತದೆ ಎಂಬುದನ್ನು ನೀವಿಲ್ಲಿ ಕಾಮೆಂಟ್ ಮೂಲಕ ತಿಳಿಸಬಹುದು. (ಏಜೆನ್ಸೀಸ್)