ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಭಾರಿ ಮಳೆ, ಭೂಕುಸಿತ, ಇಲ್ಲಿಯವರೆಗೆ 81 ಮಂದಿ ಸಾವು

ff
Published on

ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿರಂತರ ಮಳೆ ಮತ್ತು ಭೂಕುಸಿತದಿಂದ 81 ಜನರು ಮೃತಪಟ್ಟಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಾಯಾಳುಗಳನ್ನು ರಕ್ಷಿಸಲು ಮತ್ತು ಹಲವಾರು ಸ್ಥಳಗಳಲ್ಲಿ ಮನೆಯ ಅವಶೇಷಗಳಡಿ ಸಿಲುಕಿರುವ ದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರೆದಿದೆ.


ಭಾನುವಾರ ರಾತ್ರಿಯಿಂದ ಒಟ್ಟು 57 ಶವಗಳನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಬುಧವಾರ ಮೃತರ ಸಂಖ್ಯೆ 71ಕ್ಕೆ ಏರಿಕೆಯಾಗಿದ್ದು, ಹೆಚ್ಚಿನ ಮೃತದೇಹಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳಲ್ಲಿ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.


ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಜೂನ್ 24 ರಂದು ಮುಂಗಾರು ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಒಟ್ಟು 214 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ ಮತ್ತು 38 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಶಿಮ್ಲಾ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ, ಅಲ್ಲಿ ಮೂರು ಪ್ರದೇಶಗಳು- ಸಮ್ಮರ್ ಹಿಲ್, ಫಾಗ್ಲಿ ಮತ್ತು ಕೃಷ್ಣ ನಗರವು ಭೂಕುಸಿತದಿಂದ ತೀವ್ರವಾಗಿ ಹಾನಿಗೊಳಗಾಗಿವೆ.


ಹಿಮಾಚಲ ಪ್ರದೇಶವು ಈ ವರ್ಷ 54 ದಿನಗಳ ಮುಂಗಾರಿನಲ್ಲಿ ಈಗಾಗಲೇ 742 ಮಿಮೀ ಮಳೆಯನ್ನು ಕಂಡಿದೆ.ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಸಂಭವಿಸುವ ಭೀತಿಯಲ್ಲಿ ಕೃಷ್ಣಾ ನಗರದಲ್ಲಿನ ಸುಮಾರು 15 ಮನೆಗಳನ್ನು ತೆರವುಗೊಳಿಸಲಾಗಿದ್ದು, ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net