ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ! ಈ ವರ್ಷ ಗುತ್ತಿಗೆದಾರಿಗೆ 800 ಕೋಟಿ ರೂ. ಪಾವತಿಸಲಾಗಿದೆ: ಸಿಎಂ

ವಿಜಯವಾಣಿ - 2025-01-23T185816.278
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ. ಆದರೆ ಶೀಘ್ರಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರಿಗೆ ಈ ವರ್ಷ 800 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ನೀಡುವುದಾಗಿ 2023-24ರ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ತಮ್ಮ ಬಜೆಟ್​ನಲ್ಲಿಯೂ ಇದನ್ನು ಪುನರುಚ್ಚರಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿದ್ದರು. ಇಷ್ಟು ವರ್ಷಗಳಾದರೂ ಒಂದು ಪೈಸೆಯೂ ರಾಜ್ಯಕ್ಕೆ ಬಂದಿಲ್ಲ" ಎಂದರು.

"ಸರ್ಕಾರ ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಪ್ರಧಾನಿಗಳು, ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರನ್ನೂ ಭೇಟಿ ಮಾಡಲಾಗಿದೆ. ಅವರೇ ಬಜೆಟ್​ನಲ್ಲಿ ಘೋಷಣೆ ಮಾಡಿರುವುದನ್ನು ಕೊಡಿ ಎಂದರೂ ಬಿಡುಗಡೆ ಮಾಡಿಲ್ಲ. ನನ್ನನ್ನೂ ಒಳಗೊಂಡಂತೆ ಉಪಮುಖ್ಯಮಂತ್ರಿಗಳು ಭೇಟಿಯಾಗಿ ಬಂದಿದ್ದಾರೆ. ನಬಾರ್ಡ್​ನಲ್ಲಿ ರಾಜ್ಯಕ್ಕೆ ಬರಬೇಕಾದ ಸಾಲದ ಮೊತ್ತ ಕಡಿತವಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದಾಗಲೂ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಆದರೆ ಇಂದಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಈ ಬಜೆಟ್​ನಲ್ಲಿಯಾದರೂ ಹಣ ಮೀಸಲಿಟ್ಟು ಬಿಡುಗಡೆ ಮಾಡಲಿ ಎಂದು ಪತ್ರವನ್ನು ಕೇಂದ್ರಕ್ಕೆ ಬರೆದು ಒತ್ತಡ ಹಾಕಲಾಗುತ್ತಿದೆ. ರೈತರ ಜಮೀನು ಮುಳುಗಡೆಯಾಗದಂತೆ ತಡೆಯಲು ಪ್ರಯತ್ನವಿದೆ" ಎಂದರು. ಹೊಸದುರ್ಗ ತಾಲ್ಲೂಕಿನ ಹಿನ್ನೀರಿನಲ್ಲಿ ರೈತರ ಜಮೀನು ಮುಳುಗಡೆಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಮುಳುಗಡೆಯಾಗದ ರೀತಿಯಲ್ಲಿ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ" ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net