ಜಿಲ್ಲೆಯಲ್ಲಿ ಬರದಿಂದ 80 ಕೋಟಿ ರೂ. ನಷ್ಟ

agree jd g.c.poornima(1)
ಕೃಷಿ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ
Published on

ಶಿವಮೊಗ್ಗ: ಮುಂಗಾರಿನಲ್ಲಿ ಶೇ.37 ಮಳೆ ಕೊರತೆ ಉಂಟಾಗಿದ್ದು ಶೇ.57ರಷ್ಟು ಭತ್ತ, ಶೇ.85ಕ್ಕಿಂತ ಅಧಿಕ ಮೆಕ್ಕೆಜೋಳಕ್ಕೆ ಹಾನಿಯಾಗಿದೆ. 1.18 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದರೆ, 10 ಸಾವಿರ ಹೆಕ್ಟೇರ್ ಬಿತ್ತನೆಯೇ ಆಗಿಲ್ಲ. ಒಟ್ಟಾರೆ 80 ಕೋಟಿ ರೂ. ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಮುಂಗಾರು ಕೊರತೆಯಿಂದ ಒಟ್ಟಾರೆ ಶೇ.68 ಬೆಳೆ ನಷ್ಟವಾಗಿದೆ. ಜುಲೈ ತಿಂಗಳಲ್ಲಿ ಮಳೆ ಆಗಿದ್ದು ಬಿಟ್ಟರೆ ಉಳಿದಂತೆ ಮಳೆ ಆಗಲೇ ಇಲ್ಲ. ಹಾಗಾಗಿ ಬಿತ್ತನೆ ಮಾಡಿದ ಬೆಳೆಯೂ ನಷ್ಟವಾಗಿದೆ. 33,678 ಮೆಟ್ರಿಕ್ ಟನ್ ರಸರಗೊಬ್ಬರ ಬಾಕಿ ಇದ್ದು ಹಿಂಗಾರು ಬೆಳೆಗಳಿಗೆ ವಿತರಿಸಲಾಗುವುದು ಎಂದರು.
ಮಳೆ ಇಲ್ಲದ ಕಾರಣ ಪರ್ಯಾಯ ಬೆಳೆಗೆ ಸರ್ಕಾರ ಸಲಹೆ ನೀಡಿತ್ತು. ಅದನ್ನು ರೈತರು ಅನುಷ್ಠಾನ ಮಾಡಲಿಲ್ಲವೇ ಎಂದು ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೂರ್ಣಿಮಾ, ಮಳೆ ಕೊರತೆ ಕಾರಣಕ್ಕೆ ಪರ್ಯಾಯ ಬೆಳೆಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ ರೈತರು ಯಾರೂ ಮಾತು ಕೇಳಲಿಲ್ಲ ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಎನ್.ಪ್ರಕಾಶ್ ಮಾತನಾಡಿ, ಈ ಬಾರಿ ಮಳೆ ಕೊರತೆಯಾದರೂ ತೋಟಗಾರಿಕೆ ಬೆಳೆಗಳು ನಷ್ಟವಾಗಿಲ್ಲ. ಆದರೆ ಅಡಕೆಗೆ ಅಲ್ಲಲ್ಲಿ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದ್ದು ಅದಕ್ಕೆ ಮುಂದಿನ ತಿಂಗಳಿಂದ ಔಷಧ ವಿತರಣೆ ಮಾಡಲಾಗುವುದು ಎಂದು ಹೇಳಿದರು. ಆಗುಂಬೆ, ನಗರ, ಕೂಡುರು, ಬಾರಂಗಿ ಹೋಬಳಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಆ ಭಾಗದ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net