ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್; 8 ವಿದ್ಯಾರ್ಥಿಗಳು ಸಸ್ಪೆಂಡ್​, 10 ಸಾವಿರ ರೂ. ದಂಡ! | Ragging

ವಿಜಯವಾಣಿ - 2025-02-07T220539.411
Published on

Ragging: ಉತ್ತರ ಪ್ರದೇಶದ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ಮೆಮೋರಿಯಲ್​ ವೈದ್ಯಕೀಯ ಕಾಲೇಜಿನ (GSVM) ಎಂಟು ವಿದ್ಯಾರ್ಥಿಗಳು ತಮ್ಮ ಜೂನಿಯರ್ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಮಾಡಿದ ಆರೋಪದಡಿ ಆರು ತಿಂಗಳ ಕಾಲ ಕಾಲೇಜಿನಿಂದ ಅಮಾನತುಗೊಂಡಿದ್ದಾರೆ. ಇದರೊಟ್ಟಿಗೆ ತಲಾ 10,000 ರೂ. ದಂಡವನ್ನೂ ಪಡೆದಿದ್ದಾರೆ ಎಂದು ಸೈಬರ್ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಹಿರಿಯ ವಿದ್ಯಾರ್ಥಿಗಳು, ನಕಲಿ ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಜೂನಿಯರ್ ವಿದ್ಯಾರ್ಥಿಗಳನ್ನು ಪದೇ ಪದೇ ಚುಡಾಯಿಸಿದ್ದಾರೆ. ಇದಲ್ಲದೆ, ದೂರವಾಣಿ ಕರೆಗಳು ಮತ್ತು ಸಂದೇಶಗಳ ಮೂಲಕ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 8 ವಿದ್ಯಾರ್ಥಿಗಳ ವಿರುದ್ಧ ರ‍್ಯಾಗಿಂಗ್ ಮಾಡಿರುವ ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಅವರನ್ನು ಆರು ತಿಂಗಳ ಕಾಲ ಕಾಲೇಜಿಗೆ ಪ್ರವೇಶಿಸದಂತೆ ಸಸ್ಪೆಂಡ್​ ಮಾಡಲಾಗಿದೆ.

ಈ ವಿದ್ಯಾರ್ಥಿಗಳು ನಕಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳನ್ನು ರಚಿಸಿರುವುದು ಸೈಬರ್ ಸೆಲ್ ತನಿಖೆಯಲ್ಲಿ ತಿಳಿದುಬಂದಿದೆ. "ಹಿರಿಯ ವಿದ್ಯಾರ್ಥಿಗಳು ತಮ್ಮ ಜೂನಿಯರ್ ವಿದ್ಯಾರ್ಥಿಗಳಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ ಮತ್ತು ರ‍್ಯಾಗಿಂಗ್ ಮಾಡಿದ್ದಾರೆ. ಇದು ಸ್ಪಷ್ಟವಾಗಿದೆ" ಎಂದು ಗಣೇಶ್ ಶಂಕರ್ ವಿದ್ಯಾರ್ಥಿ ಮೆಮೋರಿಯಲ್​ (GSVM) ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಕಲಾ ಹೇಳಿದ್ದಾರೆ.

ಸಿಸಿಟಿವಿ ದೃಶ್ಯಗಳ ಮೂಲಕ ಹಿರಿಯ ವಿದ್ಯಾರ್ಥಿಗಳ ದುಷ್ಕೃತ್ಯಗಳು ಬಹಿರಂಗಗೊಂಡಿವೆ. ವಿಷಯ ಬೆಳಕಿಗೆ ಬಂದ ಬಳಿಕ ಆರೋಪಿ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಆದರೆ, 8 ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಬಂದ ಹಿನ್ನೆಲೆ ಅವರನ್ನು ಇದೀಗ ಕಾಲೇಜಿನಿಂದ ಸಸ್ಪೆಂಡ್​ ಮಾಡಿ, 10 ಸಾವಿರ ರೂ. ದಂಡ ವಿಧಿಸಲಾಗಿದೆ.

"ಈ ವಿಷಯದ ಬಗ್ಗೆ ಸರ್ಕಾರ ಮತ್ತು ರ‍್ಯಾಗಿಂಗ್ ಸೆಲ್‌ಗೆ ಮಾಹಿತಿಯನ್ನು ನೀಡಲಾಗಿದೆ. ವೈದ್ಯಕೀಯ ಕಾಲೇಜು ಆಡಳಿತವು ಈ ಘಟನೆ ಬಗ್ಗೆ ತನಿಖೆ ನಡೆಸಿ, ಸಾಕ್ಷ್ಯವನ್ನು ಪರಿಶೀಲಿಸಿದ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ" ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net