

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ ಬನ್ನು ಕಂಟೋನ್ಮೆಂಟ್ನಲ್ಲಿರುವ ಪಾಕಿಸ್ತಾನದ ಸೇನಾ ನೆಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಈ ದುರಂತದಲ್ಲಿ ಒಟ್ಟು 8 ಪಾಕಿಸ್ತಾನದ ಯೊಧರು ಹುತಾತ್ಮರಾಗಿದ್ದಾರೆ.
ಆತ್ಮಾಹುತಿ ಬಾಂಬರ್ಗಳು ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸೇನಾ ನೆಲೆಯಲ್ಲಿ ಸುತ್ತುವರಿದ ಗೋಡೆಗೆ ಡಿಕ್ಕಿ ಹೊಡೆದು ದಾಳಿ ನಡೆಸಿದರು. ಪರಿಣಾಮ 8 ಸೈನಿಕರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಏಳು ಮಂದಿ ಸೈನಿಕರು ಮತ್ತು ಒಬ್ಬ ಅರೆಸೇನಾ ಯೋಧ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದ ಎಲ್ಲಾ 10 ದಾಳಿಕೋರರನ್ನು ಪಾಕ್ ಸೈನಿಕರು ಸತತ 18 ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ದಾಳಿ ನಡೆಸಿದ ಎಲ್ಲರೂ ಈ ವಿಧ್ವಂಸಕ ಕೃತ್ಯದಲ್ಲಿ ಮೃತಪಟ್ಟಿದ್ದಾರೆ. ಎಂದು ಪಾಕಿಸ್ತಾನಿ ಮಿಲಿಟರಿ ಹೇಳಿಕೆ ಬಿಡುಗಡೆ ಮಾಡಿದೆ.
ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಮತ್ತು ಇತರ ಅಧಿಕಾರಿಗಳು ಒಂದು ದೊಡ್ಡ ದುರಂತವನ್ನು ತಡೆಗಟ್ಟುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಅಫ್ಘಾನಿಸ್ತಾನದಿಂದ ಬರುತ್ತಿರುವ ಬೆದರಿಕೆಗಳ ವಿರುದ್ಧ ಪಾಕ್ ಸಶಸ್ತ್ರ ಪಡೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಬಂಡುಕೋರರು ವಸತಿ ಪ್ರದೇಶಕ್ಕೆ ನುಸುಳಿ ದಾಳಿ ನಡೆಸಿದ್ದರಿಂದ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಹಫೀಜ್ ಗುಲ್ ಬಹದ್ದೂರ್ ಗುಂಪು ದಾಳಿ ನಡೆಸಿದೆ ಎಂದು ಪಾಕ್ ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.