ಶಾಲೆಯೊಂದರಲ್ಲಿ ಯುವಕನಿಂದ ಚೂರಿ ಇರಿತ; 8 ಮಂದಿ ಸಾವು, 17 ಮಂದಿ ಗಂಭೀರ

Crime Scene
Published on

ಬೀಜಿಂಗ್​: ಶಾಲೆಯೊಂದರಲ್ಲಿ ಯುವಕ ನಡೆಸಿದ ದಾಳಿಯಲ್ಲಿ (Stabbing) 8 ಮಂದಿ ಮೃತಪಟ್ಟಿದ್ದು, 17 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೂರ್ವ ಚೀನಾದ ವುಕ್ಸಿ ನಗರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿಯೊಬ್ಬರು, 21 ವರ್ಷದ ವಿದ್ಯಾರ್ಥಿಯೊಬ್ಬ ನವೆಂಬರ್​ 16ರ ಸಂಜೆ ಪೂರ್ವ ಚೀನಾದ ವುಕ್ಸಿ ನಗರದಲ್ಲಿ ಚೂರಿ ಹಿಡಿದು (Stabbing) ದಾಳಿ ನಡೆಸಿದ ಪರಿಣಾಮ ಎಂಟು ಮಂದಿ ಮೃತಪಟ್ಟು, 17 ಮಂದಿ ಗಾಯಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿಲ್ಲ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಝುಹೈ ನಗರದಲ್ಲಿ ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ (CPLA) ಆಯೋಜಿಸಿದ್ದ ಏರ್‌ಶೋ ಕಾರ್ಯಕ್ರಮ ನಡೆಯುವ ಮುನ್ನಾ ದಿನ ಕ್ರೀಡಾ ಕೇಂದ್ರದ ಹೊರಗೆ ಹಿಟ್ ಅಂಡ್ ರನ್ ಘಟನೆಯಲ್ಲಿ 35 ಜನರು ಮೃತಪಟ್ಟು, 43 ಮಂದಿ ಗಾಯಗೊಂಡಿದ್ದರು. ಇದೀಗ ವಿದ್ಯಾರ್ಥಿಯಿಂದ ಚೂರಿ ದಾಳಿಯಾಗಿರುವುದು ಮತ್ತಷ್ಟು ಕಳವಳವನ್ನು ಹೆಚ್ಚಿಸಿದ್ದು, ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net