ಆರೋಗ್ಯ ಕ್ಷೇತ್ರಕ್ಕೆ ₹8ಕೋಟಿ ಸಿಎಸ್‌ಆರ್ ನಿಧಿ: ಜಿಲ್ಲೆಯ ವಿವಿಧ ಪ್ರಾಧಿಕಾರಗಳ ಕೊಡುಗೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾಹಿತಿ

15-06-rama-rudresh press meet
Published on

ರಾಮನಗರ : ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳು ತಮ್ಮ ಸಿಎಸ್‌ಆರ್ ನಿಧಿಯ 8 ಕೋಟಿ ರೂ.ಗಳನ್ನು ಜಿಲ್ಲೆಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ನೀಡಲು ಮುಂದಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಹಾಗೂ ಕೋವಿಡ್ ಸೋಂಕು ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರ, ಚನ್ನಪಟ್ಟಣ, ಮಾಗಡಿ, ಕನಕಪುರ ಯೋಜನಾ ಪ್ರಾಧಿಕಾರಗಳು ಮತ್ತು ಬಿಡದಿ ಸ್ಮಾರ್ಟ್ ಸಿಟಿ ಪ್ರಾಧಿಕಾರಗಳು ತಮ್ಮ ಸಿಎಸ್‌ಆರ್ ನಿಧಿಯಿಂದ 8 ಕೋಟಿ ರೂ. ನೀಡಲಿದ್ದು, ಈ ಹಣ ಬಳಸಿಕೊಳ್ಳಲು ಸರ್ಕಾರ ಸಹ ಅನುಮತಿ ನೀಡಿದೆ ಎಂದು ತಿಳಿಸಿದರು.

ಸದ್ಯ ಡಿಡೈಮರ್, ಸಿಆರ್‌ಪಿ, ಎಲ್‌ಡಿಎಚ್ ಮುಂತಾದ ರಕ್ತ ಪರೀಕ್ಷೆಗಳಿಗೆ ಬೆಂಗಳೂರಿನ ಪ್ರಯೋಗಾಲಯಗಳನ್ನು ಆಶ್ರಯಿಸಬೇಕಾಗಿದೆ. ಪ್ರಾಧಿಕಾರಗಳು ನೀಡುವ ಅನುದಾನದಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಅತ್ಯಾಧುನಿಕ ಮಾದರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯ ಕಟ್ಟಡದಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು. ಈ ಎಲ್ಲ ಸೌಲಭ್ಯಗಳು ಜಿಲ್ಲೆಯಲ್ಲೇ ಲಭ್ಯವಾದರೆ, ಬೆಂಗಳೂರಿನ ಅವಲಂಬನೆ ಕಡಿಮೆಯಾಗಲಿದೆ ಎಂದರು.

ಹಾಲಿ ಇರುವ ಕೆಲವು ಆಂಬ್ಯುಲೆನ್ಸ್ ಗಳನ್ನು ಐಸಿಯು ಆನ್ ವೀಲ್ಸ್ ಮಾದರಿ ಉನ್ನತೀಕರಿಸಲಾಗುವುದು. ಪೋರ್ಟಬಲ್ ಎಕ್ಸ್‌ರೇ ಉಪಕರಣ, ಪ್ರತಿ ಪಿಎಚ್‌ಸಿಗೆ ಎರಡು ಜಂಬೋ ಆಕ್ಸಿಜನ್ ಸಿಲಿಂಡರ್‌ಗಳನ್ನು ಸಹ ಪೂರೈಸಲಾಗುವುದು.

ರಾಮನಗರ ನಗರ ಪ್ರದೇಶಗಳಲ್ಲಿ ರಾಯರದೊಡ್ಡಿ ಮತ್ತು ಮೆಹಬೂಬ ನಗರ ಪಿ.ಎಚ್.ಸಿ.ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಬಳಿ ಇರುವ ಸಿಎ ಸೈಟುಗಳ ಪೈಕಿ ಎರಡು ನಿವೇಶನಗಳನ್ನು ಗುರುತಿಸಿ ಅಲ್ಲಿ ನಗರ ಪಿ.ಎಚ್.ಸಿಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಗುರಿ ಇದೆ ಎಂದು ರಾಕೇಶ್ ಕುಮಾರ್ ತಿಳಿಸಿದರು.

ಗೋಷ್ಠಿಯಲ್ಲಿ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್, ಜಿಪಂ ಸಿಇಒ ಇಕ್ರಂ, ಪ್ರಾಧಿಕಾರಗಳ ಅಧ್ಯಕ್ಷರುಗಳಾದ ಮುರುಳೀಧರ, ರಂಗಧಾಮಯ್ಯ, ಜಗನ್ನಾಥ್, ಕಾಳಯ್ಯ ಮತ್ತು ರಾಮನಗರ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಗರಾಜು ಹಾಜರಿದ್ದರು.

ಜಿಲ್ಲೆಯನ್ನು ಆರೋಗ್ಯ ಕ್ಷೇತ್ರದಲ್ಲಿ ಸ್ವಾವಲಂಬಿ ಮಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಪ್ರಾಧಿಕಾರಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿವೆ. ಇದರಿಂದ ಕೋವಿಡ್ ವಿರುದ್ಧದ ಹೋರಾಟವನ್ನು ಜಿಲ್ಲೆಯಲ್ಲಿ ಸ್ವತಂತ್ರವಾಗಿ ಎದುರಿಸಲು ಸಹಕಾರಿ ಆಗಲಿದೆ. ಎಂ.ರುದ್ರೇಶ್ ಕೆಆರ್‌ಐಡಿಎಲ್ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net