ಕೆಮ್ಮಿನ ಸಿರಪ್ ಸೇವನೆ 8 ಮಕ್ಕಳು ಬಲಿ

Syrup
Published on

ನವದೆಹಲಿ/ಭೋಪಾಲ್: ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಒಟ್ಟು ಎಂಟು ಮಕ್ಕಳು ಮೃತಪಟ್ಟಿದ್ದು ಕಳವಳದ ವಾತಾವರಣ ಸೖಷ್ಟಿಯಾಗಿದೆ. ಪೋಷಕರಲ್ಲಿ ಉಂಟಾಗಿರುವ ಆತಂಕ ದೂರ ಮಾಡಲು ಸಿರಪ್ ಸೇವಿಸಿದ ರಾಜಸ್ಥಾನದ ಒಬ್ಬ ಹಿರಿಯ ವೈದ್ಯ ಕೂಡ ಪ್ರಜ್ಞಾಹೀನರಾಗಿದ್ದು, ಔಷಧ ವಿಷಯುಕ್ತವಾಗಿದೆ ಎಂಬ ಅನುಮಾನಕ್ಕೆ ಇಂಬು ನೀಡಿದೆ.

ರಾಜಸ್ಥಾನದಲ್ಲಿ ಇಬ್ಬರು ಮತ್ತು ಮಧ್ಯಪ್ರದೇಶದಲ್ಲಿ ಆರು ಮಕ್ಕಳು ಸಾವಿಗೀಡಾಗಿದ್ದು, ಇದಕ್ಕೆ ಕೆಮ್ಮಿನ ಸಿರಪ್ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ರಾಜ್ಯದಲ್ಲಿ ಹಲವು ಔಷಧಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಬಯಾನಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ತಾರಾಚಂದ್ ಯೋಗಿ ಸೆಪ್ಟೆಂಬರ್ 24ರಂದು ಚಿಂತಿತ ಕುಟುಂಬಗಳ ಎದುರೇ ಒಂದು ಡೋಸ್ ಸಿರಪ್ ಕುಡಿದಿದ್ದರು. ಅದಾದ ಎಂಟು ಗಂಟೆ ನಂತರ ಯೋಗಿ ತಮ್ಮ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಹೀಗಾಗಿ ವ್ಯಾಪಕವಾಗಿ ವಿತರಣೆ ಆಗಿರುವ ಔಷಧದ ಸುರಕ್ಷತೆ ಬಗ್ಗೆ ಆತಂಕದ ಅಲೆ ಎದ್ದಿದೆ.

ಅನುರಿಯಾ ಸಮಸ್ಯೆ: ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಸೆಪ್ಟೆಂಬರ್ 4ರಿಂದ 26ರ ನಡುವೆ ಎರಡು ಸಿರಪ್​ಗಳನ್ನು ಸೇವಿಸಿದ್ದ ಒಂದರಿಂದ ಏಳು ವರ್ಷದ ಆರು ಮಕ್ಕಳು ಕಿಡ್ನಿ ಸಂಬಂಧಿತ ಹಾಗೂ ಅನುರಿಯಾ (ಮೂತ್ರ ಉತ್ಪಾದನೆ ಕೊರತೆ) ಸಮಸ್ಯೆಯಿಂದಾಗಿ ಮೖತಪಟ್ಟಿದ್ದರು. ಈ ಆರೂ ಮಕ್ಕಳಿಗೆ ನೀಡಿದ್ದ ಕೆಮ್ಮಿನ ಸಿರಪ್ ಸಾಮಾನ್ಯವಾಗಿತ್ತು ಎಂಬುದು ಔಷಧಗಳ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಆದ್ದರಿಂದ ಈ ಔಷಧಗಳನ್ನು ಶಿಫಾರಸು ಮಾಡದಂತೆ ಸರ್ಕಾರ ವೈದ್ಯರಿಗೆ ಸೂಚಿಸಿದೆ. ಅವುಗಳ ಮಾರಾಟ ಹಾಗೂ ಬಳಕೆಯನ್ನೂ ನಿರ್ಬಂಧಿಸಿದೆ.

22 ಬ್ಯಾಚ್ ನಿಷೇಧ

ರಾಜಸ್ಥಾನದಲ್ಲಿನ ಬೆಳವಣಿಗೆಗಳ ಕಾರಣ ರಾಜ್ಯ ಸರ್ಕಾರ ನಿರ್ದಿಷ್ಟ ಸಿರಪ್​ನ 22 ಬ್ಯಾಚ್​ಗಳನ್ನು ನಿಷೇಧಿಸಿ ಈಗಿರುವ ದಾಸ್ತಾನನ್ನು ವಾಪಸ್ ತರಿಸಿಕೊಂಡಿದೆ. ಅಲ್ಲದೇ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದೆ. ರಾಜ್ಯದಲ್ಲಿ ಜುಲೈನಿಂದೀಚೆಗೆ ಈ ಸಿರಪ್​ನ 1.33 ಲಕ್ಷ ಬಾಟಲಿಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿ 8,200 ಬಾಟಲಿಗಳು ಜೈಪುರದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಇನ್ನೂ ಉಳಿದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net