ಬೋಟ್ಸ್ವಾನದಿಂದ ಬರಲಿವೆ 8 ಚೀತಾ

chita
Published on

ಭೋಪಾಲ್: ಆಫ್ರಿಕಾದ ಬೋಟ್ಸ್ವಾನದಿಂದ 8 ಚೀತಾಗಳನ್ನು ಭಾರತಕ್ಕೆ ತರಲಾಗುತ್ತಿದ್ದು, ಮೇ ತಿಂಗಳಿನಲ್ಲಿ ಮೊದಲ ಹಂತದಲ್ಲಿ 4 ಚೀತಾಗಳು ಭಾರತಕ್ಕೆ ಬರಲಿವೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದಲ್ಲಿ ನಡೆದ ಚೀತಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್​ಟಿಸಿಎ) ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಬೋಟ್ಸ್ವಾನ ಮತ್ತು ಕೀನ್ಯಾದಿಂದ 2 ಹಂತಗಳಲ್ಲಿ 8 ಚೀತಾಗಳನ್ನು ತರಲಾಗುವುದು. ಮೇನಲ್ಲಿ 4 ಚೀತಾಗಳು ಬರಲಿದ್ದು, ಆ ಬಳಿಕ ಉಳಿದ 4 ಚೀತಾಗಳು ಬರಲಿವೆ. ಇದುವರೆಗೆ ಚೀತಾ ಯೋಜನೆಗೆ 112 ಕೋಟಿ ರೂ. ಖರ್ಚು ಮಾಡಲಾಗಿದ್ದು, ಇದರಲ್ಲಿ ಶೇ. 67 ಭಾಗ ಚೀತಾಗಳ ಪುನರ್ವಸತಿ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಎನ್​ಟಿಸಿಎ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಮಧ್ಯಪ್ರದೇಶ ಸರ್ಕಾರ ತಿಳಿಸಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 14 ಮರಿಗಳು ಸೇರಿ 26 ಚೀತಾಗಳಿವೆ. ಇದರಲ್ಲಿ 16 ಚೀತಾಗಳು ಅರಣ್ಯ ಪ್ರದೇಶದಲ್ಲಿದ್ದರೆ ಉಳಿದ 10 ಚೀತಾಗಳು ಪುನರ್ವಸತಿ ಕೇಂದ್ರದಲ್ಲಿವೆ ಎಂದು ಮಾಹಿತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net