ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 8.48 ಲಕ್ಷ ಮಂದಿ

SSLC-Web
Published on

ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.27ರಿಂದ ಏ.7ರವರೆಗೆ ನಡೆಯಲಿದ್ದು, 14,735 ಶಾಲೆಗಳ 8,48,192 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ 6,543 ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ.

ಪರೀಕ್ಷೆ ಬರೆಯುವರ ಪೈಕಿ ಹೊಸ ಅಭ್ಯರ್ಥಿಗಳು 7,64,180. ಖಾಸಗಿ ಅಭ್ಯರ್ಥಿಗಳು 20,951. ಪುನರಾವರ್ತಿತ ಶಾಲೆಗಳ ಅಭ್ಯರ್ಥಿಗಳು 54,432. ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳ ಸಂಖ್ಯೆ 8,629 ಇದೆ.

ಪರೀಕ್ಷೆಯು 2879 ಕೇಂದ್ರಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಕರಡು ಪ್ರವೇಶಪತ್ರ ಬಿಡುಗಡೆ ಮಾಡಲಾಗಿದೆ. ತಿದ್ದುಪಡಿ ಬಳಿಕ ಫೆಬ್ರವರಿ ವೇಳಗೆ ಅಂತಿಮ ಪ್ರವೇಶಪತ್ರ ಬಿಡುಗಡೆ ಮಾಡುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ.19ರಿಂದ 228 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಆನ್​ಲೈನ್​ನಲ್ಲಿ ಮೌಲ್ಯಮಾಪಕರ ನೋಂದಣಿಗೆ ಸೂಚನೆ ನೀಡಲಾಗಿತ್ತು. ಈ ವರ್ಷ ಸುಮಾರು 79.670 ಮೌಲ್ಯಮಾಪಕರು ನೋಂದಣಿ ಮಾಡಿಕೊಂಡಿದ್ದು, ನಮಗೆ ಇಷ್ಟೊಂದು ಮೌಲ್ಯಮಾಪಕರ ಅಗತ್ಯವಿಲ್ಲ. ಅವಶ್ಯಕ ಮೌಲ್ಯಮಾಪಕರ ಬಳಕೆ ಮಾಡಿಕೊಂಡು ಬೇಗ ಫಲಿತಾಂಶ ನೀಡಲು ಪ್ರಯತ್ನಿಸುತ್ತೇವೆ. ಮುಖ್ಯಶಿಕ್ಷಕರಿಗೆ ವಿದ್ಯಾರ್ಥಿಗಳ ಆಂತರಿಕ ಅಂಕ ನಮೂದಿಸಲು ಫೆಬ್ರವರಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್, ರಾಜ್ಯ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net