ರಾಷ್ಟ್ರೀಯ ಈಜು: ರುಜುಲಾ ಕೂಟ ದಾಖಲೆ, ರಾಜ್ಯಕ್ಕೆ ಮತ್ತೆ 4 ಚಿನ್ನದ ಪದಕ

ರಾಷ್ಟ್ರೀಯ ಈಜು: ರುಜುಲಾ ಕೂಟ ದಾಖಲೆ, ರಾಜ್ಯಕ್ಕೆ ಮತ್ತೆ 4 ಚಿನ್ನದ ಪದಕ
ರಾಷ್ಟ್ರೀಯ ಈಜು: ರುಜುಲಾ ಕೂಟ ದಾಖಲೆ, ರಾಜ್ಯಕ್ಕೆ ಮತ್ತೆ 4 ಚಿನ್ನದ ಪದಕ
Published on
ಬೆಂಗಳೂರು: ಕರ್ನಾಟಕದ ರುಜುಲಾ ಎಸ್​. ಅಹಮದಾಬಾದ್​ನಲ್ಲಿ ನಡೆಯುತ್ತಿರುವ 79ನೇ ಸೀನಿಯರ್​ ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​ನಲ್ಲಿ (Senior national championship) ನೂತನ ಕೂಟ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಕರ್ನಾಟಕದ ಈಜುಪಟುಗಳು ಕೂಟದ 5ನೇ ದಿನವಾದ ಶನಿವಾರ 4 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಸಹಿತ ಒಟ್ಟು 8 ಪದಕ ಗೆದ್ದುಕೊಂಡರು. ಕರ್ನಾಟಕ ತಂಡ ಈಗ 17 ಚಿನ್ನ, 13 ಬೆಳ್ಳಿ, 8 ಕಂಚಿನ ಸಹಿತ ಒಟ್ಟು 38 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾನುವಾರ ಕೂಟದ ಅಂತಿಮ ದಿನವಾಗಿದ್ದು, ರಾಜ್ಯಕ್ಕೆ ಸಮಗ್ರ ಚಾಂಪಿಯನ್​ ಪಟ್ಟ ಒಲಿಯುವುದು ಬಹುತೇಕ ಖಾತ್ರಿಯಾಗಿದೆ.

ರುಜುಲಾ ಮಹಿಳೆಯರ 50 ಮೀ. ಫ್ರೀಸ್ಟೈಲ್​ ವಿಭಾಗದಲ್ಲಿ 26.23 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಕಳೆದ ವರ್ಷ ಭುವನೇಶ್ವರದಲ್ಲಿ ತಾನೇ ನಿರ್ಮಿಸಿದ್ದ ಕೂಟ ದಾಖಲೆಯನ್ನು (26.36 ಸೆ) ಸುಧಾರಿಸಿಕೊಂಡರು. ಇದೇ ಸ್ಪರ್ಧೆಯಲ್ಲಿ ರಾಜ್ಯದ ಚರಿತಾ ಪಿ. (26.53ಸೆ) ಬೆಳ್ಳಿ ಪದಕ ಗೆದ್ದುಕೊಂಡರು.
ರಾಜ್ಯದ ಮಣಿಕಂಠ ಎಲ್​. ಪುರುಷರ 200 ಮೀ. ಬ್ರೆಸ್ಟ್​ಸ್ಟ್ರೊಕ್​ನಲ್ಲಿ 2 ನಿಮಿಷ, 19.45 ಸೆಕೆಂಡ್​ಗಳಲ್ಲಿ ಈಜಿ ಚಿನ್ನ ಗೆದ್ದರೆ, ಸೂರ್ಯ ಜೋಯಪ್ಪ (2ನಿ, 22.31ಸೆ) ಕಂಚು ಒಲಿಸಿಕೊಂಡರು.
ಪುರುಷರ 4/100 ಮೀ. ಫ್ರೀಸ್ಟೈಲ್​ನಲ್ಲಿ ಕರ್ನಾಟಕ ತಂಡ 3 ನಿಮಿಷ, 24.15 ಸೆಕೆಂಡ್​ಗಳಲ್ಲಿ ಈಜುವ ಮೂಲಕ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿತು. ಮಹಿಳೆಯರ 4/200 ಮೀ. ಫ್ರೀಸ್ಟೈಲ್​ನಲ್ಲೂ ರಾಜ್ಯ ತಂಡ 8 ನಿಮಿಷ, 42.48 ಸೆಕೆಂಡ್​ಗಳಲ್ಲಿ ಈಜಿ ಕೂಟ ದಾಖಲೆಯೊಂದಿಗೆ ಚಿನ್ನ ಒಲಿಸಿಕೊಂಡಿತು.

ರಾಜ್ಯದ ದರ್ಶನ್​ ಎಸ್​. ಪುರುಷರ 800 ಮೀ. ಫ್ರೀಸ್ಟೈಲ್​ ಮತ್ತು ತಾನ್ಯಾ ಷಡಾಕ್ಷರಿ ಮಹಿಳೆಯರ 200 ಮೀ. ಬ್ರೆಸ್ಟ್​ಸ್ಟ್ರೊಕ್​ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net