ಮಗನ ವಯಸ್ಸಿನ ಬಾಡಿಗೆದಾರನ ಜತೆ ಅಕ್ರಮ ಸಂಬಂಧ ಶಂಕೆ: ಪತ್ನಿ ಕೈಮುರಿದ ನಿವೃತ್ತ ಸರ್ಕಾರಿ ನೌಕರ

Eldrely Woman
Published on

ಬೆಂಗಳೂರು: ಮಗನ ವಯಸ್ಸಿನ ಬಾಡಿಗೆದಾರನೊಂದಿಗೆ 68 ವರ್ಷದ ಪತ್ನಿ ಅನೈತಿಕ ಸಂಬಂಧ ಹೊಂದಿರುವ ಸಂಶಯ ಹಿನ್ನೆಲೆಯಲ್ಲಿ ಬೆಂಗಳೂರು ಸಚಿವಾಲಯದ 78 ವಯಸ್ಸಿನ ಮಾಜಿ ಉದ್ಯೋಗಿಯೊಬ್ಬ ಪತ್ನಿಗೆ ಥಳಿಸಿ ತೋಳು ಮುರಿದಿರುವ ಘಟನೆ ನಡೆದಿದೆ.

34 ವರ್ಷ ವಯಸ್ಸಿನ ಬಾಡಿಗೆದಾರನ ಪತ್ನಿಯು ಗರ್ಭಿಣಿಯಾಗಿದ್ದರಿಂದ ಈ ವರ್ಷದ ಆರಂಭದಲ್ಲೇ ತವರು ಮನೆಗೆ ಹೋಗಿ ನೆಲೆಸಿದ್ದಳು. ಅಡುಗೆ ಮಾಡಲು ಬರದ ಬಾಡಿಗೆದಾರನ ಕಷ್ಟಕ್ಕೆ ಮಿಡಿದ ಹಿರಿಯ ಜೀವ ನೆರವಿಗೆ ಧಾವಿಸಿ ಕರುಣೆಯಿಂದ ಆತನಿಗೆ ಸಹಾಯ ಮಾಡುತ್ತಿದ್ದರು.

ಇತ್ತ ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿದ್ದ ಪತಿ, ಪತ್ನಿಯ ಮೇಲೆ ಸಂದೇಹ ಪಡಲು ಆರಂಭಿಸಿದ. ಆದರೂ ಆಕೆ ಬಾಡಿಗೆದಾರನಿಗೆ ಸಹಾಯ ಮಾಡುವುದನ್ನು ನಿಲ್ಲಿಸದೇ ಲಾಕ್​ಡೌನ್​ ಸಮಯದಲ್ಲಿ ಇನ್ನಿತರ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಇದರಿಂದ ಇನ್ನಷ್ಟು ಕೋಪಗೊಂಡಿದ್ದರು.

ಜುಲೈ ಆರಂಭದಲ್ಲಿ ಹಿರಿಯ ದಂಪತಿ ನಡುವೆ ಶುರುವಾದ ಜಗಳ ಒಮ್ಮೆ ತಾರಕಕ್ಕೇರಿತು. ಒಂದು ದಿನ ಪತಿ ಮಹಾಶಯ ನಿರ್ದಯೆಯಿಂದ ಪತ್ನಿಯನ್ನು ಥಳಿಸಿದ. ಇದರಿಂದ ಪತ್ನಿಯ ತೋಳು ಮುರಿದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಕೆ ಪರಿಹಾರ ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೋರಿದ್ದರು.

ನೆರವಿಗೆ ಬಂದ ಪರಿಹಾರ ಆಪ್ತ ಸಲಹೆಗಾರ ತಮಗಿಂತಲೂ ಅರ್ಧ ವಯಸ್ಸಿನ ಬಾಡಿಗೆದಾರನನ್ನು ನಿಮ್ಮ ಪತ್ನಿ ಮಗನ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಎಷ್ಟೇ ಮನದಟ್ಟು ಮಾಡಿದರೂ ಮಹಿಳೆಯ ಪತಿ ಕೇಳಲು ಸಿದ್ಧರಿರಲಿಲ್ಲ.

ಇದೀಗ ಪರಿಹಾರ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದೆ. ಇಷ್ಟೆಲ್ಲಾ ನಡೆದರೂ ಸಂತ್ರಸ್ತ ಮಹಿಳೆ ಪತಿಯೊಂದಿಗೆ ವಾಸವಿದ್ದು, ಅವರ ಆರೋಗ್ಯ ಮಾಹಿತಿಯನ್ನು ಆಗಾಗ ಕರೆ ಮಾಡುವ ಮೂಲಕ ಪರಿಹಾರ ಸಹಾಯವಾಣಿ ತಿಳಿದುಕೊಳ್ಳುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net