

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಉದ್ಯೋಗಸ್ಥರ ಅನುಕೂಲಕ್ಕಾಗಿ ರಜೆ ದಿನವೂ ಕರ್ತವ್ಯ ನಿರ್ವಹಿಸುತ್ತಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮೊದಲ ದಿನವೇ (ಜೂ. 1 ಭಾನುವಾರ) 774 ದಸ್ತಾವೇಜು ನೋಂದಣಿ ಆಗಿವೆ. ಇದರಿಂದ ಸರ್ಕಾರಕ್ಕೆ 3 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ.
ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಸೇರಿ ಉದ್ಯೋಗಸ್ಥ ಅಧಿಕಾರಿ, ಸಿಬ್ಬಂದಿಗೆ ಅನುಕೂಲ ಆಗುವಂತೆ ಸರ್ಕಾರಿ ರಜೆ ದಿನಗಳಾದ 2 ಮತ್ತು 4ನೇ ಶನಿವಾರ ಮತ್ತು ಭಾನುವಾರ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿರ್ಧರಿಸಿತ್ತು. ಪ್ರತಿ ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯ ತಲಾ ಒಂದು ಕಚೇರಿ ಸರತಿ ಸಾಲಿನಂತೆ ರಜೆ ದಿನ ತೆರೆದು ಅದರ ಮುಂದಿನ ಮಂಗಳವಾರ ರಜೆ ಮಾಡಲು ಇಲಾಖೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಥಮ ರಜೆ ದಿನವಾದ ಜೂ.1ರಂದು (ಭಾನುವಾರ) ರಾಜ್ಯದಲ್ಲಿ 35 ಸಬ್ ರಿಜಿಸ್ಟ್ರಾರ್ ಕಚೇರಿಗಳು ತೆರೆದಿದ್ದವು. 774 ದಸ್ತಾವೇಜುಗಳು ನೋಂದಣಿ ಆಗಿದ್ದು, 3 ಕೋಟಿ 31 ಲಕ್ಷ ರೂ. ರಾಜಸ್ವ ಸಂಗ್ರಹವಾಗಿದೆ. ಪ್ರಮುಖವಾಗಿ ಧಾರವಾಡದಲ್ಲಿ 140, ಚಿತ್ರದುರ್ಗದಲ್ಲಿ 95 ಮತ್ತು ವಿಜಯಪುರದಲ್ಲಿ 69 ರಿಜಿಸ್ಟ್ರೇಷನ್ ನಡೆದಿದ್ದು, ಮೊದಲ ಮೂರು ಸ್ಥಾನದಲ್ಲಿವೆ.
ಬೆಂಗಳೂರಿನ ಶಿವಾಜಿನಗರ, ಕೊಡಗು ಮತ್ತು ಕಾರವಾರದಲ್ಲಿ ಕಚೇರಿ ತೆರೆದಿದ್ದರು. ಯಾವುದೇ ವ್ಯವಹಾರ ನಡೆದಿಲ್ಲ.
ಬಾಗಲಕೋಟೆ, ಮಂಗಳೂರಿನಲ್ಲಿ ತಲಾ 1 ಮತ್ತು ಬಸವನಗುಡಿಯಲ್ಲಿ 2 ಮತ್ತು ಗಾಂಧಿನಗರ, ಹಾಸನ, ಕೊಪ್ಪಳದಲ್ಲಿ ತಲಾ 3 ನೋಂದಣಿ ನಡೆದಿದೆ. ಕೃಷಿ ಸಾಲ ಸೌಲಭ್ಯದಲ್ಲಿ ಮ್ಯುಟೇಷನ್‌ನಲ್ಲಿ ಉಲ್ಲೇಖಿಸುವ ‘್ರೂಟ್ಸ್’ ರಿಜಿಸ್ಟ್ರೇಷನ್ 60 ನಡೆದಿದೆ. 1526 ಋಣಭಾರ ಪ್ರಮಾಣ ಪತ್ರ (ಇಸಿ) ಮತ್ತು ದೃಢೀಕರಣ ಪ್ರಮಾಣ ಪತ್ರ (ಸಿಸಿ) 22 ವಿತರಿಸಲಾಗಿದೆ.
ಅದೇ ರೀತಿಯಾಗಿ ಹಿಂದು ವಿವಾಹ ಕಾಯ್ದೆಯಡಿ ಆನ್‌ಲೈನ್‌ನಲ್ಲಿ 53 ವಿವಾಹ ನೋಂದಣಿ ಮತ್ತು ಆ್ಲೈನ್‌ನಲ್ಲಿ 28 ಮದುವೆ ನೋಂದಣಿಯಾಗಿದೆ. ರಜೆ ದಿನ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯುವ ಯೋಜನೆ ಸಾರ್ವಜನಿಕರಿಗೆ ಸರಿಯಾಗಿ ತಿಳಿದಿಲ್ಲ.
ಆದರಿಂದ ಪ್ರಥಮ ದಿನ 774 ರಿಜಿಸ್ಟ್ರೇಷನ್ ನಡೆದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ವಿಷಯ ತಿಳಿದು ಅವರು ಅನುಕೂಲ ಪಡೆಯುತ್ತಾರೆ. ಹೆಚ್ಚಿನ ಆದಾಯ ಸಂಗ್ರಹದ ಗುರಿಯಲ್ಲ. ಇದು ಕೇವಲ ಉದ್ಯೋಗಸ್ಥರಿಗೆ ಮತ್ತು ರಜೆ ಸಿಗದೆ ಇರುವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಹೊಸ ಪ್ಲ್ಯಾನ್ ಮಾಡಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.