

| ದೇವರಾಜ್ ಎಲ್. ಬೆಂಗಳೂರು
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಸೀಟು ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. 2021-22ನೇ ಸಾಲಿಗೆ ರಾಜ್ಯದಲ್ಲಿ 750 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ದೊರೆಯಲಿದೆ.
ಗಗನ ಕುಸುಮವಾಗಿರುವ ವೈದ್ಯಕೀಯ ಶಿಕ್ಷಣ ಕೋರ್ಸ್ ವ್ಯಾಸಂಗಕ್ಕೆ ಕಡಿಮೆ ಸೀಟುಗಳ ಲಭ್ಯತೆಯೇ ಸಮಸ್ಯೆಯಾಗಿ ಕಾಡುತ್ತಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ನಾಲ್ಕು ಸರ್ಕಾರಿ ಮತ್ತು ಒಂದು ಖಾಸಗಿ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಲಿದ್ದು, ಪ್ರತಿ ಕಾಲೇಜಿನಿಂದ 150 ಸೀಟುಗಳಂತೆ ಐದು ಕಾಲೇಜುಗಳಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 750 ಸೀಟುಗಳು ದೊರೆಯಲಿವೆ.
2020ರ ಅವಧಿಗೆ ರಾಜ್ಯದಲ್ಲಿ 54 ಕಾಲೇಜುಗಳಿಂದ 6,872 ಲಭ್ಯವಿದ್ದವು. 2021ರ ಸಿಇಟಿಗೆ ಯಾದಗಿರಿ, ಹಾವೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಹಾಗೂ ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜುಗಳಿಗೆ ವೈದ್ಯಕೀಯ ಕೋರ್ಸ್ ನಡೆಸಲು ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಅನುಮತಿ ನೀಡಿರುವ ಕಾರಣ ಈ ಬಾರಿ ಹೆಚ್ಚುವರಿ ವೈದ್ಯಕೀಯ ಸೀಟುಗಳು ಲಭ್ಯವಾಗಲಿದೆ.
ಪ್ರತಿ ವರ್ಷ ವೈದ್ಯಕೀಯ ಸೀಟು ಪಡೆಯುವುದಕ್ಕಾಗಿ ಸಾವಿರಾರು ಜನರು ಅರ್ಜಿ ಸಲ್ಲಿಸುತ್ತಾರೆ. ಇದಕ್ಕಾಗಿ ನಡೆಸುವ ನೀಟ್ ಪರೀಕ್ಷೆಯನ್ನು ಬರೆಯುತ್ತಾರೆ. ಬರೆದು ಇದರಲ್ಲಿ ಹೆಚ್ಚಿನ ರ್ಯಾಂಕ್ ಪಡೆದವರು ಅಖಿಲ ಭಾರತೀಯ ಕೋಟಾದ ಸೀಟುಗಳನ್ನು ಪಡೆಯುತ್ತಾರೆ. ಉಳಿದವರು ಸ್ಟೇಟ್ ರ್ಯಾಂಕ್ ಆಧಾರದ ಮೇಲೆ ಸೀಟುಗಳನ್ನು ಪಡೆಯುತ್ತಾರೆ.
ದಂಧೆ ನಡೆಯುತ್ತದೆ: ಪ್ರತಿ ಬಾರಿ ಉತ್ತಮ ಕಾಲೇಜುಗಳಲ್ಲಿ ಸೀಟು ದೊರಕಿಸಿಕೊಡುತ್ತೇವೆಂದು ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಲಕ್ಷಾಂತರ ಹಣವನ್ನು ಏಜೆಂಟ್ಗಳು ಪಡೆಯುತ್ತಾರೆ. ವಾಮ ಮಾರ್ಗದಲ್ಲಿ ನುಸುಳಿ ಸೀಟು ಪಡೆಯುಲು ಪ್ರಯತ್ನಿಸುತ್ತಾರೆ. ಇತ್ತೀಚಿಗಷ್ಟೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕ ಸೀಟು ಪಡೆದು ದಾಖಲೆ ಪರಿಶೀಲನೆ ವೇಳೆ ಬೇರೆ ಅಭ್ಯರ್ಥಿಗಳು ನಕಲು ದಾಖಲೆಗಳನ್ನು ತಂದು ಸಿಕ್ಕಿ ಬಿದ್ದರು. ಈ ಪ್ರಕರಣವನ್ನು ಹೆಚ್ಚುವರಿ ತನಿಖೆಗಾಗಿ ಕೆಇಎ ಪೊಲೀಸರಿಗೆ ದೂರು ನೀಡಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಮೂರು ಅಭ್ಯರ್ಥಿಗಳ ಸೀಟನ್ನು ಕೆಇಎ ರದ್ದು ಮಾಡಿದೆ.
ಈ ಹಿಂದೆ ವೈದ್ಯರ ಪುತ್ರಿ ಶ್ರವಣ ದೋಷವೆಂದು ಸುಳ್ಳು ಪ್ರಮಾಣ ಪತ್ರವನ್ನು ನೀಡಿ ಕೆಇಎ ಮೂಲಕ ಖಾಸಗಿ ಕಾಲೇಜಿನಲ್ಲಿ ಸೀಟು ಪಡೆದಿದ್ದರು. ಈ ಸೀಟನ್ನು ರದ್ದು ಮಾಡುವಂತೆ ಕೆಇಎ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು.
ಈ ರೀತಿಯಾಗಿ ಹಲವಾರು ಮಾರ್ಗಗಳಿಂದ ವೈದ್ಯಕೀಯ ಸೀಟು ಪಡೆಯಲು ವಿದ್ಯಾರ್ಥಿಗಳು ಮತ್ತು ಪಾಲಕರು ಹರ ಸಾಹಸ ಪಡುತ್ತಾರೆ. ಸದ್ಯ ಇನ್ನೂ 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ. ರಾಜ್ಯ ಸರ್ಕಾರ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಕಾಲೇಜು ನಿರ್ಮಾಣ ಮಾಡಲು ಆಲೋಚಿಸುತ್ತಿದೆ. ಇದು ಆದರೆ, ಮತ್ತಷ್ಟು ಸೀಟುಗಳು ಲಭ್ಯವಾಗಲಿದೆ.
ವೈದ್ಯಕೀಯ ಕೋರ್ಸ್ಗಳಿಗೆ ಬಾರೀ ಬೇಡಿಕೆ ಇರುವುದರಿಂದ ಸೀಟುಗಳ ಸಂಖ್ಯೆ ಹೆಚ್ಚಾಗದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
|ಡಾ.ಎಸ್.ಸಚ್ಚಿದಾನಂದ ಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ