

ಕನ್ನಡ ಸಾಹಿತ್ಯಲೋಕ ಶ್ರೀಮಂತಗೊಳಿಸಿದವರ ಸಾಲಿನಲ್ಲಿ ನಿಲ್ಲುವ ಬಿ.ಆರ್.ಲಕ್ಷ್ಮಣರಾವ್ ಕಾವ್ಯಶರಧಿಯಲ್ಲಿ ಈಜಲು ಆರಂಭಿಸಿ 50 ಸಂವತ್ಸರ ಕಳೆದಿದೆ. ಮಿಂಚುಹರಿಸಿದ ತುಂಟ ಕವಿ ಎಂಬ ಖ್ಯಾತಿಯೂ ಅವರಿಗಿದೆ. ಅವರ ಕಾವ್ಯಕ್ಕೆ ಮುಪ್ಪಾಗುವುದೇ ಇಲ್ಲ ಎಂಬ ವ್ಯಾಖ್ಯಾನವಿದೆ. ನವಿರಾಗಿ ಎಲ್ಲ ವಯೋಮಾನದವರಿಗೆ ಒಪ್ಪುವ, ಎಲ್ಲರಿಗೂ ಸಲ್ಲುವ ಕವಿಯಾಗಿದ್ದಾರೆ. ಕಾವ್ಯಕ್ಕೆ ಐವತ್ತರ ಸಂಭ್ರಮವಾದರೆ, ಈ ವಿಶೇಷ ಕವಿ ಗೌರಿಹಬ್ಬದಂದು ಎಪ್ಪತೆôದರ ಹೊಸ್ತಿಲು ತುಳಿಯುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ವಿಜಯವಾಣಿ ಬಳಗವು ಕ್ಲಬ್ಹೌಸ್ನಲ್ಲಿ ಸಂವಾದ ಮುಖೇನ ಗೌರವ ಸಲ್ಲಿಸುವ ಮತ್ತು ನೆನಪಿನಂಗಳಕ್ಕೆ ಕರೆದೊಯ್ಯುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬಿ.ಆರ್. ಲಕ್ಷ್ಮಣರಾವ್ ಅವರ ಸಮಕಾಲೀನರಾದ ಎಚ್.ಎಸ್.ವೆಂಕಟೇಶಮೂರ್ತಿ, ಚಿಂತಾಮಣಿ ಕೊಡ್ಲೆಕೆರೆ, ಎಚ್.ಡುಂಡಿರಾಜ್, ಟಿ.ಎನ್.ಸೀತಾರಾಮ್ ವೈದ್ಯರಾದ ವಿಜಯಲಕ್ಷಿ್ಮ ಬಾಳೆಕುಂದ್ರಿ, ಸಾಹಿತಿ ಎಂ.ಆರ್.ಕಮಲ, ಶಶಿಕಲಾ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆತಂದರು. ಅಷ್ಟೇ ಅಲ್ಲದೆ ಕವಿತೆ ವಾಚನ, ಹಾಡುಗಳು ಹಸಿರುತೋರಣದಂತೆ ಮೆರಗುತಂತು. ಖುದ್ದು ಲಕ್ಷ್ಮಣರಾವ್ ಅವರೇ, ‘ಬಾರೇ ರಾಜಕುಮಾರಿ...’ ಕವಿತೆ ಹಾಡಿದರೆ, ಗಾಯಕಿ ರಮ್ಯಾ ವಸಿಷ್ಠ ಒಂದು ಕವಿತೆ ಪ್ರಸ್ತುತಪಡಿಸಿದರು.
ಗುರುಗೆಳೆಯನ ಒಡನಾಟ...
ಲಕ್ಷ್ಮಣ ರಾವ್ಗೆ ನಾನು ಗುರುಗೆಳೆಯ ಎಂದೇ ಹೇಳುತ್ತೇನೆ. ಗುರುವೂ ಹೌದು ಗೆಳೆಯನೂ ಹೌದು. ಲಕ್ಷ್ಮಣ ರಾವ್ ಮಾಡಿದ್ದು ಪದಗಳ ಜತೆಗಿನ ಆಟ, ಪದಗಳ ಕಸರತ್ತು ಎನ್ನುವುದಕ್ಕಿಂತ ಕಾವ್ಯಕ್ರೀಡೆ ಎನ್ನುತ್ತೇನೆ ಎಂದು ನೆನಪಿನ ಪುಟಗಳನ್ನು ತೆರೆದಿಟ್ಟವರು ಖ್ಯಾತ ಕವಿ ಎಚ್.ಡುಂಡಿರಾಜ್. ಬಿಆರ್ಎಲ್ ಅವರ ಮೊದಲ ಸಂಕಲನದಲ್ಲೇ ಬೇಕಾದಷ್ಟು ಪದಗಳಾಟ ಸಿಗುತ್ತದೆ. ಕ್ಯಾಬರೀಸ್, ಗುಂಡು ಹಾಕುವುದು ಎಂದು ಹೇಳದೇ ಗುಂಡಾಮೃತ ಎಂಬ ಪದ ಬಳಸುತ್ತಾರೆ. ಚಿಕ್ಕ ಪದ್ಯಗಳಲ್ಲೇ ಸಾಕಷ್ಟು ಪ್ರಯೋಗ ಇರುತ್ತದೆ. ಉದಾಹರಣೆಗೆ ವಿರುದ್ಧ ಪದ ಬಳಕೆ ವಿಶೇಷ. ಚಿಕ್ಕ ಪದ್ಯ ‘ಅವಳ ಪ್ರಕಾರ’ದಲ್ಲಿ ನಿದ್ರೆ-ಅವನಿದ್ರೆ ಎಂದು ಬಳಸುತ್ತಾರೆ. ದಬಾಯಿಸು ಪದದಲ್ಲಿ ಅವರಿಗೆ ಬಾಯ್್ಸ ಕಾಣಿಸುತ್ತದೆ. ಅದು ಕೃತಕ ಅನಿಸಲ್ಲ. ನಮ್ಮ ಸ್ನೇಹಕ್ಕೆ 37 ವರ್ಷ. 1984ರಲ್ಲಿ ಪರಿಚಯವಾಗಿತ್ತು. ನಮ್ಮ ಸ್ನೇಹಕ್ಕೆ ಕಾವ್ಯ ಕಾರಣ. 75 ಆಯಿತೆಂದು ವೈರಾಗ್ಯವಿಲ್ಲ, ಒಣ ಗಾಂಭೀರ್ಯವೂ ಇಲ್ಲ. ಈಗಲೂ 25ರ ಯುವಕನ ಸ್ವಭಾವ ಇದೆ. ಅಗಾಧ ಸ್ನೇಹದ ಕಡಲು. ಅವರು ಸೆಂಚುರಿ, ಅಜೇಯ ಶತಕ ಬಾರಿಸಲಿ ಎಂದರು. ಅವರ ಮಾತಿಗೆ ಪ್ರತಿಕ್ರಿಯಿಸಿದ ಬಿಆರ್ಎಲ್, ‘ಡುಂಡಿ ನನ್ನನ್ನು ಗುರು ಎಂದು ಕರೆದಿದ್ದಕ್ಕೆ ಕಾರಣವೂ ಇದೆ. ಅವನ ಸಂಕಲನಕ್ಕೆ ಮುನ್ನುಡಿ ಕೂಡ ಬರೆದಿದ್ದೆ. ಅವತ್ತಿಂದ ಗುರು ಗೆಳೆಯ ಸಂಬಂಧ ಹೀಗೆ ಮುಂದುವರಿದು ಬಿಟ್ಟಿದೆ. ಮಧ್ಯೆ ಕೆಲವರು ಗಂಭೀರ ಪದ್ಯ ಬರೆಯಬೇಕು ಎಂದು ಹೇಳಿದ್ದರು. ಆದರೆ, ನಿನ್ನ ರೀತಿ ಬೇರೆಯವರು ಬರೆಯಲು ಆಗಲ್ಲ. ನೀನು ಅದನ್ನು ಬಿಡಬೇಡ ಎಂದಿದ್ದೆ. ಇಂದು ಆತನಿಗೆ ‘ಹನಿಗವನಗಳ ರಾಜ’ ಪಟ್ಟ ಕಟ್ಟಿ ಕುಟ್ಟಿಕೂರಿಸಿದ್ದಕ್ಕೆ ನಾನೂ ಕಾರಣ’ ಎಂದು ನಕ್ಕರು.
ಕಾಡುವ ತಂದೆಯ ಮಹತ್ವ
ತಂದೆ ಕುರಿತು ಅಭಿಪ್ರಾಯ ಹಂಚಿಕೊಂಡ ಬಿ.ಆರ್.ಲಕ್ಷ್ಮಣರಾವ್, ಅವರಿಂದ ಸಿಕ್ಕ ಬಳುವಳಿ ಹಾಗೂ ಅವರ ಕುರಿತ ಪಾಪಪ್ರಜ್ಞೆಯನ್ನು ಪ್ರಸ್ತಾಪಿಸಿದ್ದಾರೆ.‘ಗೋಪಿ ಮತ್ತು ಗಾಂಡಲೀನ’ದಲ್ಲಿ ತಂದೆಯ ಬಗ್ಗೆ ಬೇರೆ ಬೇರೆ ಅರ್ಥದಲ್ಲಿ ವಿವರಿಸಿದ್ದೇನೆ. ಬಹಳ ಮುಖ್ಯವಾಗಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯಲ್ಲಿ ಭೂಮಿಯನ್ನು ತಾಯಿ, ದೇವರನ್ನು ತಂದೆ ಎನ್ನುತ್ತಾರೆ. ಆ ಸಂಬಂಧವನ್ನು ನಾನು ವಿಸ್ತರಿಸಿದೆ. ಪ್ರತಿ ಮನೆಯಲ್ಲೂ ಅಪ್ಪನೊಂದಿಗಿನ ಸಂಬಂಧ ಬೇರೆಯದ್ದು. ಅಮ್ಮನೊಂದಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ತಂದೆ- ಮಗನ ನಡುವೆ ಘರ್ಷಣೆ ಇದ್ದೇ ಇರುತ್ತದೆ, ಅದನ್ನು ಪದ್ಯದಲ್ಲಿ ತರಲು ಪ್ರಯತ್ನಿಸಿದ್ದಿದೆ. ನನಗೆ ಸಂಗೀತ ಅಪ್ಪನಿಂದ ಬಂದ ಬಳುವಳಿ. ತಂದೆ-ಮಗನ ನಡುವೆ ಈಡೀಪಸ್ ಕಾಂಪ್ಲೆಕ್ಸ್ ಇದ್ದಿದ್ದೇ. ನಾವು ತಂದೆಯಾದಾಗಲೇ ತಂದೆಯ ಮಹತ್ವ ಗೊತ್ತಾಗುವುದು. ನನ್ನ ಬಗ್ಗೆ ಯಾವ ರೀತಿ ಯೋಚನೆ ಮಾಡುತ್ತಿದ್ದರು ಎಂಬುದೆಲ್ಲ ಮತ್ತೆ ನೆನಪಾಗುತ್ತದೆ. ಅಂದು ತಂದೆಯನ್ನು ನೋಯಿಸಿದೆನೋ ಎಂದು ಈಗ ಅಪರಾಧಿ ಭಾವ ಕಾಡುತ್ತದೆ. ಎಲ್ಲ ತಲೆಮಾರಲ್ಲೂ ಇಂತಹ ಘರ್ಷಣೆ ಕಾಡುತ್ತದೆ’.
ಅರ್ಧ ಶತಮಾನದ ಮಧುರ ಮೈತ್ರಿ
ಲಕ್ಷ್ಮಣ ರಾವ್ ನನ್ನ ಆತ್ಮೀಯ ಗೆಳೆಯ. ನಮ್ಮಿಬ್ಬರದ್ದು ಐವತ್ತು ವರ್ಷದ ಸ್ನೇಹ. ಯಾವ ರೀತಿಯ ಒಡಕು ಇಲ್ಲದೇ ನಿರಂತರವಾಗಿ ಸಾಗಿ ಬಂದಿದೆ. ಅದಕ್ಕೆ ಇಬ್ಬರೂ ಕಾರಣ, ಬಹಳ ಜತನವಾಗಿ ಕಾಪಾಡಿಕೊಂಡಿದ್ದೇವೆ. ಇದು ಇಬ್ಬರ ಸ್ನೇಹ. ಅವರದ್ದು ಸಾಚಾ ವ್ಯಕ್ತಿತ್ವ. ಮುಚ್ಚುಮರೆ ಇಲ್ಲದ ವ್ಯಕ್ತಿತ್ವ. ಯಾರಿಗೋ ಅನುಕೂಲ ಆಗಬೇಕೆೆಂದು ಬದುಕಲ್ಲಿ ಸುಳ್ಳು ಹೇಳಲಿಲ್ಲ. ತನಗೆ ಅನಿಸಿದಂತೆ ಜೀವನ ಸಾಗಿಸಿ, ಸಾಹಿತ್ಯ ಮಾಡಿಕೊಂಡು ಬಂದ. ಪ್ರಧಾನವಾಗಿ ಅವನ ಲಂಘಿಸುವ, ರಕ್ಷಿಸಿಕೊಳ್ಳುವ ಗುಣ ಬಹಳ ಆಶ್ಚರ್ಯವಾಗಿ ಕಂಡುಬರುತ್ತದೆ. ಅವನು ನುರಿತ ಬ್ಯಾಟ್ಸ್ಮನ್ ರೀತಿ. ಕ್ರೀಸ್ ಒಳಗೆ ಒಂದು ಕಾಲು, ಹೊರಗೆ ಒಂದು ಕಾಲು ಇರುತ್ತದೆ. ಬಾಲ್ ತಪ್ಪಿದರೂ ಔಟ್ ಆಗಲ್ಲ, ಒಂದು ಕಾಲು ಗೆರೆಯೊಳಗೆ ಸ್ವಸ್ಥಾನದಲ್ಲಿ ಗಟ್ಟಿಯಾಗಿರುತ್ತದೆ. ಅನೇಕ ಬಾರಿ ಮನಸ್ತಾಪಗಳನ್ನು ಲಕ್ಷ್ಮಣ ಕಟ್ಟಿಕೊಂಡಿದ್ದರೂ ಅದನ್ನು ಮುಂದುವರಿಸುವ ಗುಣ ಇಲ್ಲ. ಹೀಗಾಗಿ ವೈರತ್ವದ ಕಹಿ ಉಳಿಯಲ್ಲ. ನನ್ನ ಹಾಗೂ ಅವನ ನಡುವೆ ಇದೇ ರೀತಿ ಹೊಂದಾಣಿಕೆ ಇದ್ದೇ ಇದೆ. ಖಾಸಗಿ ಪ್ರಾಮುಖ್ಯತೆ ಕೆಣಕಿದ್ದಿಲ್ಲ, ನೀತಿಮಾತು ಹೇಳಿದ್ದಿಲ್ಲ. ಅವನ ಕಾವ್ಯಕ್ಕೆ ಸಂಬಂಧಪಟ್ಟಂತೆ ಹೇಳಿದ್ದರೆ ಈಗ ತಪ್ಪೆನಿಸಿದೆ. ಬಹಳ ಪರಿಣತ ಸಹಜ ಕವಿ, ಕಾವ್ಯಕ್ಕಾಗಿ ಹಠ ತೊಟ್ಟು ತಿಣುಕಿಲ್ಲ. ಸಹಜವಾಗಿ ಕಾವ್ಯ ಪ್ರವಾಹವಾಗಿದೆ. ಸ್ವಾಭಾವಿಕತೆ, ಕನ್ನಡ ದೇಸೀತನ ಕಾಣಿಸುತ್ತದೆ. ಅವನು ಅಭಿನಯಿಸಲ್ಲ. ಅಭಿನಯ ಮಾಡಿದಾಗ ಸೋಲಾಗಬಹುದು. ಬದುಕಿನಲ್ಲಿ ಸಹಜವಾಗಿರುವವರಿಗೆ ಸೋಲಿರುವುದಿಲ್ಲ. ಅವನಿಂದ ಅನೇಕ ಸಂಗತಿ ಕಲಿತಿದ್ದೇನೆ. 20 ವರ್ಷದ ಹಿಂದೆ ಇದ್ದ ತಳಮಳ, ಆತಂಕ, ಶೀಘ್ರ ಕೋಪ ಹೋಗಿ ಒಂದು ಸಮಾಧಾನ ಸ್ಥಿತಿಗೆ ಬಂದಿದ್ದರೆ ಅದಕ್ಕೆ ಲಕ್ಷ್ಮಣನ ಸಹಾಯ ಇದೆ. ಆತನಲ್ಲಿ ಯಾವಾಗಲೂ ಕೋಪ, ಬೇಸರ ನೋಡಿಲ್ಲ. ಹಾಗೆಂದು ಯಾವಾಗಲೂ ಇನ್ನೊಬ್ಬರನ್ನು ಮೆಚ್ಚಿಸಲು ಮಾತನಾಡಿಲ್ಲ. ರಿಲಯಬಲ್ ಗೆಳೆಯ, ಒಳ್ಳೆಯ ಸಂವೇದನಾಶೀಲ ಕವಿ. ನಾನು ಮೆಚ್ಚಿದ್ದು ನನಗೆ, ಅವನಿಗೆ ಇಷ್ಟವಾಗುತ್ತದೆ. ಅಂದರೆ ಸಮಾನತೆ ಅಂಶ ಇದೆ. ಇನ್ನೂ ಅನೇಕ ವರ್ಷ ಬಾಳಲಿ, ಮಹತ್ವದ ಕೃತಿ, ಜೀವಂತ ಕೃತಿ ಬರಲಿ. ಕಾವ್ಯ ಬರೆಯಲಿ, ಬರೆಯದಿರಲಿ ಸ್ನೇಹ ಶಾಶ್ವತವಾಗಿರಲಿ. ಗೆಳೆಯನ ಮಾತಿಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣರಾವ್, ‘ಈ ಲಕ್ಷ್ಮಣ ರಾವ್ ಏನಾದರೂ ಒಂದಿಷ್ಟು ಸಾಧನೆ ಮಾಡಿದ್ದರೆ ಅದಕ್ಕೆ ಅಣ್ಣನ ಹಾಗೆ ಸದಾ ಜತೆ ಇದ್ದು, ಇಲ್ಲಿವರೆಗೆ ನಡೆಸಿಕೊಂಡು ಬಂದಿರುವ ಎಚ್.ಎಸ್.ವೆಂಕಟೇಶಮೂರ್ತಿ ಕಾರಣ ಎಂದರೆ ಅತಿಶಯೋಕ್ತಿಯಾಗಲ್ಲ’ ಎಂದರು.
ಇದ್ದದ್ದು ಇದ್ದಂತೆ ಹೇಳುವ ಗಟ್ಟಿಗ
| ನಾ. ದಾಮೋದರ ಶೆಟ್ಟಿ ಸಾಹಿತಿ
ಅನೇಕ ವರ್ಷದ ಹಿಂದೆ ನನ್ನ ಕವನ ಗಳನ್ನು ನೀಡಿದ್ದೆ, ‘ಇವು ಸಾಲದು’ ಎಂದು ಮುಖಕ್ಕೆ ರಾಚುವ ಹಾಗೆ ಹೇಳಿ ಬಿಟ್ಟರು. ಮನಸ್ಸಿಗೆ ಕಸಿವಿಸಿಯಾದರೂ, ಮತ್ತೆ ಬೇರೆ ರೀತಿಯಲ್ಲಿ ಕವನ ಬರೆಯಬೇಕು ಎಂದು ಮುಂದುವರಿಸಿದೆ. 1998ರ ಅಂತ್ಯದಲ್ಲಿ ‘ಇಂಗ್ಲೆಂಡ್ ಕವನಗಳು’ ಸಂಕಲವನ್ನು ಕಳಿಸಿದೆ. ತಕ್ಷಣವೇ, ಕಾರ್ಡಿನಲ್ಲಿ ಬರೆದು ಕಳಿಸಿದರು. ಇಷ್ಟವಲ್ಲದ ಹಾಗೂ ಇಷ್ಟವಾದ ಕವನಗಳ ಬಗ್ಗೆ ಹೇಳಿದರು. ಕವಿಯಾಗಿ ನನ್ನನ್ನು ಅಂಗೀಕರಿಸಿದರು. ನಾನು ಬರೆಯಬಹುದು ಎನ್ನಿಸಿ ನನ್ನ ಕಾಯಕ ಮುಂದುವರಿಸಿದೆ. ಅವರು ಸಂಭ್ರಮಿಸುವ ಕವಿ. ಆ ಸಂಭ್ರಮವನ್ನು ಬದುಕಿನುದ್ದಕ್ಕೂ ಪೋಷಿಸಿಟ್ಟುಕೊಂಡಿದ್ದಾರೆ, ಅದನ್ನು ಕಾವ್ಯದಲ್ಲೂ ವ್ಯಕ್ತಪಡಿಸುತ್ತಿದ್ದಾರೆ.
ಖುಷಿಯನ್ನು ಹಂಚಲು ಅನುವಾದ
| ಎಚ್.ಎಸ್. ಸತ್ಯನಾರಾಯಣ ವಿಮರ್ಶಕ
ಬಿಆರ್ಎಲ್ 50 ವರ್ಷದಲ್ಲಿ 51 ಕವಿತೆಗಳನ್ನು ಕನ್ನಡದಷ್ಟೇ ಆಪ್ತ, ಸರಳ ಹಾಗೂ ಹೃದ್ಯ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ. ‘ಗೋಪಿ-ಗಾಂಡಲೀನ’ ಕವಿತೆಗೆ 50 ವರ್ಷವಾಗಿದೆ. ಯಾವುದೇ ಸಿದ್ಧಾಂತ ಅಥವಾ ವೈಚಾರಿಕ ನೆಲೆಗಟ್ಟಿಗಿಂತಲೂ ಖುಷಿಗಾಗಿ ಅನುವಾದ ಮಾಡಿದ್ದಾರೆ. ‘ಮರ’ ಎನ್ನುವ ಅದ್ಭುತ ಕವಿತೆಯನ್ನು, ಕನ್ನಡದಲ್ಲಿ ಅನೇಕರು ರ್ಚಚಿಸಿ, ಶ್ಲಾಘಿಸಿದ್ದಾರೆ. ‘ಮೈ ಲವ್ ಈಸ್ ರೆಡ್ ರೆಡ್ ರೋಸ್’ ಎನ್ನುವುದನ್ನು ‘ಕೆಂಗುಲಾಬಿ’, ‘ಲೆಮನ್ ಟ್ರೀ’ ಎನ್ನುವುದನ್ನು ‘ನಿಂಬೆಗಿಡ’ ಎಂದು ಅನುವಾದಿಸಿದ್ದಾರೆ. 51 ಕವಿತೆಗಳ ಸಂಕಲನ ‘ಮನಸ್ಸು ಬಾವಲಿ’ ಎನ್ನುವ ಹೆಸರಿನಲ್ಲಿ ಬಿಆರ್ಎಲ್ ಅವರ 75ನೇ ಹುಟ್ಟುಹಬ್ಬದಂದು ಬಿಡುಗಡೆ ಆಗುತ್ತಿದೆ. ಅದರಲ್ಲಿ ಇಂಗ್ಲಿಷ್, ಸರ್ಬಿಯನ್, ಜರ್ಮನ್, ಸ್ಪ್ಯಾನಿಷ್, ಚೀನಿ ಜಾನಪದ, ಗ್ರೀಕ್ ಜತೆಗೆ ತೆಲುಗು, ಬಂಗಾಳಿ, ಮಲೆಯಾಳ ಭಾಷೆಗಳಿಂದ ಅನುವಾದ ಆದ ಕವಿತೆಗಳೂ ಇವೆ.
ಹಿಂಜರಿಕೆ ಹೋಗಲಾಡಿಸಿದ್ರು
| ಮಾಲಿನಿ ಗುರುಪ್ರಸನ್ನ ಕವಯಿತ್ರಿ
ನಾನು ಬಾಲ್ಯದಲ್ಲೇ ಬಿಆರ್ಎಲ್ ಕವಿತೆ ಓದಲು ಆರಂಭಿಸಿದ್ದೆ. ಹಾಡು ಬರೆಯುವುದು ಅಪರಾಧ ಎಂಬಂತಿದ್ದ ಪರಿಸ್ಥಿತಿಯಲ್ಲಿ ನನ್ನಲ್ಲಿನ ಹಿಂಜರಿಕೆ ಹೋಗಲಾಡಿಸಿದರು. ಮಡಿವಂತಿಕೆ ಮೀರಿ ಸೂಕ್ಷ್ಮ ಸಂಗತಿ ಹೇಳಿದರು. ಅವರದ್ದು ಬೆರಗಿನ ಕಾವ್ಯ. ಪಂಚೇಂದ್ರಿಯಕ್ಕೆ ಪ್ರಾಮುಖ್ಯ. ಗೋಪಿ ಗಾಂಡಲೀನದಲ್ಲಿ ಲಾರೆನ್ಸ್ ನೆನಪಾಗಿಸಿದರು. ದೈಹಿಕ ವಿವರಣೆ ಕಟ್ಟಿಕೊಡುವುದರಲ್ಲಿ ಎತ್ತಿದ ಕೈ. ಅಶ್ಲೀಲದಿಂದ ಹೊರತಾಗಿ ಆಹ್ಲಾದತೆ ತುಂಬುತ್ತಾರೆ. ಅವರ ಲವಲವಿಕೆ ನೋಡಿದರೆ ಹೊಟ್ಟೆ ಕಿಚ್ಚಾಗುತ್ತದೆ. ಕನ್ನಡ ಕಾವ್ಯಜಗತ್ತಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲಿಸುವುದು ಗುಂಡಪ್ಪ ವಿಶ್ವನಾಥ್ ಕವಿತೆ.
ಗಾಯನ ಸಮಯ
ಬಿಆರ್ಎಲ್ ಅವರು ನನಗೆ ಸಿಕ್ಕಷ್ಟು ಕಾಲ ಕಾವ್ಯಭೋಜನ ಉಣಬಡಿಸುತ್ತಾರೆ. ಇಷ್ಟ ಆಗುವುದು ಹಾಗೂ ಇಷ್ಟ ಆಗದ್ದನ್ನು ಮುಕ್ತವಾಗಿ ಹೇಳುತ್ತಾರೆ. (ದುಗುಡ ಮಡುವಾದ ಮೊಡವ ತಡೆದು ಕಂಬನಿಗರೆಸುವ ಬೆಟ್ಟಗಳು ಕವಿತೆ ಹಾಡಿದರು)
|ರಾಘವೇಂದ್ರ ಬೀಜಾಡಿ
ಓದಲು ಸ್ಪೂರ್ತಿ ನೀಡಿದವರು
| ಟಿ.ಎನ್.ಸೀತಾರಾಮ್ ನಿರ್ದೇಶಕ
ಹಾಸ್ಟೆಲ್ನಲ್ಲಿ ನನ್ನ ಗುರು ರೀತಿ ಇದ್ದಿರಿ. ಯಾವುದನ್ನು ಓದಬೇಕು ಎಂದು ಹೇಳಿಕೊಟ್ಟಿರಿ. ಗೋಪಿ- ಗಾಂಡಲಿನಾ ಜತೆಗೆ, ತುಂಟತನದ ಜತೆಗೆ ಅಪ್ಪ-ಅಮ್ಮ, ಅಣ್ಣ-ತಂಗಿ ಎಲ್ಲರ ಬಗ್ಗೆಯೂ ಬರೆದಿದ್ದೀರಿ. ಕನ್ನಡಿಗ ಎಂಬ ಜತೆಗೆ ನೀವು ನಮ್ಮ ಜಿಲ್ಲೆಯವರು ಎಂಬ ಹೆಮ್ಮೆ ಇದೆ.
ಸೆ.11ಕ್ಕೆ ಕವಿಗೆ ಅಭಿನಂದನೆ
ಬೆಂಗಳೂರಿನ ಎನ್.ಆರ್. ಕಾಲನಿಯಲ್ಲಿ ರುವ ಸಿ. ಅಶ್ವತ್ಥ್ ಕಲಾಭವನದಲ್ಲಿ, ಸೆ.11ರ ಶನಿವಾರ ಬೆಳಗ್ಗೆ ಬಿಆರ್ಎಲ್ ಅವರಿಗೆ ಅಭಿನಂದನೆ, ಗೌರವ ಸಲ್ಲಿಸುವ ಸಮಯ. ಗೋಪಿ-ಗಾಂಡಲಿನಾ 50ರ ನೆನಪಿಗೆ, 51 ಅನುವಾದಿತ ಕವನಗಳ ಸಂಕಲನ ‘ಮನಸ್ಸು ಬಾವಲಿ’, ವಾಚಿಕೆ ಹಾಗೂ ‘ಗೆಳೆಯ ಲಕ್ಷ್ಮಣ’ ಎಂಬುದು ಸೇರಿ ಒಟ್ಟು ನಾಲ್ಕು ಪುಸ್ತಕಗಳು ಅಂದು ಲೋಕಾರ್ಪಣೆಯಾಗಲಿವೆ. ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಗುಣ ಬಿಆರ್ಎಲ್ ಅವರದ್ದು. ಅವರ ಕಾವ್ಯಯಾತ್ರೆ ಜೀವನೋತ್ಸಾಹ, ಲವಲವಿಕೆ, ಸ್ಪೂರ್ತಿಯ ಸಂಗಮ ಎಂದು ಬಣ್ಣಿಸಿದ ಕವಯಿತ್ರಿ ನಂದಿನಿ ವಿಶ್ವನಾಥ್ ಹೆದ್ದುರ್ಗ ಸೊಗಸಾದ ನಿರೂಪಣೆ ಮೂಲಕ ಸಂವಾದ ಕಾರ್ಯಕ್ರಮದ ತೂಕ ಹೆಚ್ಚಿಸಿದರು.
75 ಎಂದರೆ 25ರಂತೆ ಕೇಳುತ್ತದೆ
| ಎಚ್.ಎನ್. ಆರತಿ ಪತ್ರಕರ್ತೆ
ಬಿಆರ್ಎಲ್ಗೆ 75 ಎಂದರೆ 25 ಎಂದೇ ಕೇಳಿಸುತ್ತದೆ. ಬಿಆರ್ಎಲ್ ಅವರದ್ದು ಚುಂಬಕ ಶಕ್ತಿ. ನಾವು ಬಾಲ್ಯದಲ್ಲಿದ್ದಾಗ ಅನೇಕ ಘನಗಂಭೀರ ಕವಿಗಳಿರುತ್ತಿದ್ದರು. ಕವಿಗಳೆಂದರೆ ಹೀಗೇ ಇರ ಬೇಕು ಎನಿಸುತ್ತಿತ್ತು. ಆದರೆ ಅಂಥವರಲ್ಲಿ ಬಿಆರ್ಎಲ್ವಿಭಿನ್ನವಾಗಿರುತ್ತಿದ್ದರು. ಅವರು ಎಂದಿಗೂ ಗೆಳೆಯ ಎಂಬ ಭಾವನೆ ಮೂಡಿಸುತ್ತಾರೆ. ಅವರು ಬರವಣಿಗೆಯಲ್ಲಿದ್ದ ಮಡಿವಂತಿಕೆಯನ್ನು ಮುರಿದರು. ಕಟ್ಟುವ ಕಲೆಗಾರಿಕೆ ಇದ್ದವರಿಗೆ ಮಾತ್ರವೇ ಮುರಿಯುವ ಎದೆಗಾರಿಕೆ ಇರುತ್ತದೆ.
ಬಿಆರ್ಎಲ್ ಕವಿತೆಗಳ ದೊಡ್ಡ ಶಕ್ತಿ ಎಂದರೆ ಓದುಗರ ಮನಸ್ಸನ್ನು ಸಾಕಷ್ಟು ಸೂಕ್ಷ್ಮಗೊಳಿಸುತ್ತದೆ, ತೀವ್ರಗೊಳಿಸುತ್ತದೆ. ಮನುಷ್ಯನ ಸಂತೋಷ, ಭಾವನಾತ್ಮಕ ಸಂದರ್ಭದಲ್ಲಿ ಕೈ ಹಿಡಿಯುವ ಲವಲವಿಕೆಯ ಪದ್ಯ ಬರೆದಿದ್ದಾರೆ. ನಾವು ಇನ್ನಾದರೂ ಹಿರಿಯ ಕವಿ ಎಂದು ಒಪ್ಪಿಕೊಳ್ಳಬೇಕು.
| ಚಿಂತಾಮಣಿ ಕೊಡ್ಲೆಕೆರೆ ಸಾಹಿತಿ
ಜೀವನದಲ್ಲಿ ಲವಲವಿಕೆ, ಕ್ಷಣಕ್ಷಣಕ್ಕೂ ಕಾವ್ಯ ತುಂಬಿದವರು ಲಕ್ಷ್ಮಣರಾವ್. ಅವರನ್ನು ಭೇಟಿಯಾಗಿದ್ದು ಆಕಸ್ಮಿಕವಾದರೂ ಜನ್ಮಜನ್ಮದ ಋಣಾನುಬಂಧ ಎನ್ನುವಂತೆ ನಮ್ಮ ಸಂಬಂಧ. ಅವರು ಕವಿತೆ ಬರೆಯಲಷ್ಟೆ ಅಲ್ಲ, ಬದುಕಿನಲ್ಲೂ ಆ ಸಹೃದಯತೆಯನ್ನು ಬೆಳೆಸಿಕೊಂಡಿದ್ದಾರೆ.
| ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಖ್ಯಾತ ವೈದ್ಯೆ
ಒಬ್ಬ ಕವಿ ಇಷ್ಟು ಸರಳವಾಗಿರಬಹುದಾ ಎಂದು ಬಿಆರ್ಎಲ್ ಅವರನ್ನು ಭೇಟಿಯಾದಾಗ ಎನಿಸಿತು. ಮುಕ್ತವಾಗಿ, ಯಾವುದೇ ಗೋಜುಗಳಿಲ್ಲದಂತೆ ಬರೆಯುವ ವಿಧಾನ, ಅದು ಎಲ್ಲರಿಗೂ ಆಪ್ತ ಆಗುವ ರೀತಿ ನನಗೆ ಇಷ್ಟ.
| ಜಯಲಕ್ಷ್ಮೀ ಪಾಟೀಲ್ ಕಲಾವಿದೆ, ಲೇಖಕಿ
ಬಿಆರ್ಎಲ್ ಕವನಗಳನ್ನು ಓದಿದಾಗ, ಹೀಗೂ ಬರೆಯ ಬಹುದಾ ಎನ್ನುವ ವಿಚಿತ್ರ ಸಂತೋಷ. ಪುಟ್ಟಪುಟ್ಟ ಪದಗಳಲ್ಲಿ ಬೆರಗಿನ ಲೋಕವನ್ನು ತೆರೆದಿಡುವ ಪರಿಯೇ ಸೋಜಿಗ.
| ತ್ರಿವೇಣಿ ರಾವ್
ಅವರೊಳಗೆ ಒಬ್ಬ ಅದ್ಭುತ ಶಿಕ್ಷಕರಿದ್ದಾರೆ. ಯಾರಲ್ಲಿ ಪ್ರತಿಭೆಯನ್ನು ಕಂಡರೂ ಗುರುತಿಸಿ ಹೊರಸೆಳೆದು ವೇದಿಕೆ ನೀಡುವುದು ಶಿಕ್ಷಕನ ಗುಣ. ಬಿಆರ್ಎಲ್ ಅವರಿಗೆ 60 ವರ್ಷವಾದಾಗ ಚಿಂತಾಮಣಿ ಎನ್ನುವ ಅಭಿನಂದನಾ ಗ್ರಂಥಕ್ಕೆ ಅವರ ಸಮಗ್ರ ಸಂದರ್ಶನ ಮಾಡಿದ್ದೆ ಎನ್ನುವ ಹೆಮ್ಮೆ ನನಗಿದೆ.
| ಕಮಲಾ ಮೇಟಿಕುರ್ಕೆ