ಬಿಜೆಪಿ ಶಾಸಕರಿಗೆ ಆವರಿಸಿದ ಕರೊನಾ - 75 ಮಂದಿಗೆ ಪಾಸಿಟಿವ್‌!

BJP corona
Published on

ಪಟ್ನಾ: ಕ್ಷಣ ಕ್ಷಣಕ್ಕೂ ಕರೊನಾ ಆತಂಕವನ್ನು ಸೃಷ್ಟಿಸುತ್ತಲೇ ಆಗಿದ್ದು ಯಾವ ಕ್ಷಣದಲ್ಲಿ ಯಾವ ಮಾಯೆಯಲ್ಲಿ ಯಾರನ್ನು ಆವರಿಸಿಕೊಂಡುಬಿಡುತ್ತದೆಯೋ ಹೇಳತೀರದಾಗಿದೆ.

ಇದೀಗ ಬಿಹಾರ ಬಿಜೆಪಿಯಲ್ಲಿ ಕರೊನಾ ಹಾವಳಿ ಶುರುವಾಗಿದ್ದು, 75 ಮುಖಂಡರಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವೇಶ್‌ ಕುಮಾರ್‌, ಸಚಿವ ದಿನೇಶ್ ಕುಮಾರ್, ಎಂಎಲ್‌ಸಿ ರಾಜೇಶ್ ವರ್ಮಾ, ರಾಧಾ ಮೋಹನ್ ಶರ್ಮಾ ಸೇರಿದಂತೆ 75 ಬಿಜೆಪಿ ನಾಯಕರ ಕೋವಿಡ್ ವರದಿ ಇಂದು ಪಾಸಿಟಿವ್ ಬಂದಿದೆ.

ನಿನ್ನೆಯಷ್ಟೇ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಶೈಲೇಶ್‌ ಕುಮಾರ್‌ ಅವರಿಗೂ ಕರೊನಾ ಪಾಸಿಟಿವ್‌ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಹಿಂದುಳಿದ ವರ್ಗಗಳ ಇಲಾಖೆ ಸಚಿವ ವಿನೋದ್‌ ಕುಮಾರ್ ಸಿಂಗ್‌ ಹಾಗೂ ಅವರ ಪತ್ನಿಯಲ್ಲಿಯೂ ಸೋಂಕು ಪತ್ತೆಯಾಗಿತ್ತು. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ ಒಟ್ಟು 100 ಮಂದಿ ಬಿಜೆಪಿ ನಾಯಕರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಸದ್ಯ 75 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ್‌ ಚುನಾವಣೆಗೆ ಸಂಬಂಧಿಸಿದಂತೆ ಸೇರಲಾಗಿದ್ದ ಸಭೆಯಿಂದ ಈ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಗೆ ಬಂದಿದ್ದ ಒಬ್ಬರು ಅಥವಾ ಹೆಚ್ಚಿನವರಿಗೆ ಸೋಂಕು ತಗುಲಿದ್ದೇ ಎಲ್ಲರನ್ನೂ ಅದು ಆವರಿಸಿಕೊಂಡುಬಿಟ್ಟಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net