ಕೋವಿಡ್ ಸೋಂಕಿಗೆ ಇಬ್ಬರು ಬಲಿ

Covid
Published on

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 74 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದ್ದು, ಮರಣ ಪ್ರಮಾಣ ದರ ಶೇ. 2. 70 ತಲುಪಿದೆ.

ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಹೊಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯ 51 ವರ್ಷದ ವ್ಯಕ್ತಿ ಡಿ. 22ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಲಿಸದೆ ಡಿ. 23ರಂದು ಮೃತಪಟ್ಟಿದ್ದಾರೆ. ಇನ್ನು ಕೆಮ್ಮು ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಮೈಸೂರಿನ 51 ವರ್ಷದ ವ್ಯಕ್ತಿ ಡಿ. 20ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಡಿ. 25ರಂದು ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರು ಕೋವಿಡ್ ಲಸಿಕೆ ಪಡೆದಿದ್ದು, ಇನ್ನೊಬ್ಬರು ಪಡೆದಿರಲಿಲ್ಲ.

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 6,403 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸೋಂಕು ದೃಢ ಪ್ರಮಾಣ ಶೇ. 1.15 ವರದಿಯಾಗಿದೆ. ಬೆಂಗಳೂರಿನಲ್ಲಿ 2,104 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 57 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ ಮತ್ತು ಹಾಸನದಲ್ಲಿ ತಲಾ 4, ಚಿಕ್ಕಬಳ್ಳಾಪುರದಲ್ಲಿ 3, ಮಂಡ್ಯ ಮತ್ತು ಮೈಸೂರಿನಲ್ಲಿ ತಲಾ ಇಬ್ಬರು ಹಾಗೂ ಚಾಮರಾಜನಗರ ಮತ್ತು ವಿಜಯನಗರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಸೋಂಕಿತರಲ್ಲಿ 423 ಮಂದಿ ಮನೆ ಆರೈಕೆಗೆ ಒಳಗಾದರೆ, 41 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 16 ಮಂದಿ ತೀವ್ರ ನಿಗಾ ಘಟಕದಲ್ಲಿ ಹಾಗೂ 25 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಇದ್ದಾರೆ. ಸೋಂಕಿತರಲ್ಲಿ 44 ಮಂದಿ ಮಂಗಳವಾರ ಚೇತರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net