ಜ.22ರಂದೇ ಈ ರಾಜ್ಯದಲ್ಲೂ ಉದ್ಘಾಟನೆಗೊಳ್ಳಲಿದೆ 73 ಅಡಿ ಎತ್ತರದ ರಾಮಮಂದಿರ ದೇವಸ್ಥಾನ

ವಿಜಯವಾಣಿ - 2024-01-21T140706.477
Published on

ಒಡಿಶಾ: ಜನವರಿ 22ರಂದು ಅಯೋಧ್ಯೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾ ಸಮಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಇಡೀ ದೇಶವೇ ರಾಮಮಂದಿರ ಉದ್ಘಾಟನೆಯತ್ತ ಎದುರುನೋಡುತ್ತಿದೆ. ಇದೀಗ ಈ ದಿನದಂದೇ ತಮ್ಮ ರಾಜ್ಯದಲ್ಲಿ ನಿರ್ಮಿಸಲಾದ 73 ಅಡಿ ಎತ್ತರದ ರಾಮಮಂದಿರವನ್ನು ಉದ್ಘಾಟಿಸಲು ಫತೇಘರ್ ನಿವಾಸಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಒಡಿಶಾದ ನಯಾಗಢ್ ಜಿಲ್ಲೆಯ ಫತೇಘರ್ ನಿವಾಸಿಗಳು ರಾಮನ ಮಂದಿರವನ್ನು ನಿರ್ಮಿಸಿದ್ದು, ಸೋಮವಾರ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ನಡೆಯಲಿರುವ ರಾಮನ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದೊಂದಿಗೆ ಇಲ್ಲಿಯೂ ಕೂಡ ಸಮರ್ಪಣಾ ಸಮಾರಂಭವನ್ನು ನಡೆಸಲು ಮುಂದಾಗಿದ್ದಾರೆ.

73 ಅಡಿ ಎತ್ತರದ ರಾಮಮಂದಿರವನ್ನು ಸಮುದ್ರ ಮಟ್ಟದಿಂದ ಸುಮಾರು 1,800 ಅಡಿ ಎತ್ತರದ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಶ್ರೀರಾಮ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಯುಧಿಷ್ಠಿರ ಖುಂಟಿಯಾ ಮಾತನಾಡಿ, “ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅನೇಕ ಗಣ್ಯರು ಒಪ್ಪಿಗೆ ನೀಡಿದ್ದಾರೆ. ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದು, ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಮುದ್ರಿಸಿದ್ದೇವೆ. ಸೋಮವಾರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದೆ" ಎಂದಿದ್ದಾರೆ.

"ಐದು ವರ್ಷಗಳಲ್ಲಿ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಇದನ್ನು ಸಾಮಾನ್ಯ ಜನರ ದೇಣಿಗೆಯಿಂದಲೇ ನಿರ್ಮಿಸಲಾಗಿದೆ. 2018ರಲ್ಲಿ ದೇವಾಲಯದ ನಿರ್ಮಾಣ ಪ್ರಾರಂಭವಾಯಿತು. ಭಕ್ತರ ದೇಣಿಗೆಯೊಂದಿಗೆ, ದೇವಾಲಯವು ವಾಸ್ತವವಾಗಿದೆ" ಎಂದರು.

"ದೇವಸ್ಥಾನದ ದರ್ಶನಕ್ಕಾಗಿ ಬೆಟ್ಟದ ಮೇಲೆ ತಲುಪಲು, ನಾವು ಗ್ರಾಮಸ್ಥರ ಸಹಾಯದಿಂದ ಎರಡು ಕಿ.ಮೀ ಮೋಟಾರು ರಸ್ತೆಯನ್ನು ನಿರ್ಮಿಸಿದ್ದೇವೆ. ಈಗ ಭಕ್ತರು ಯಾವುದೇ ತೊಂದರೆಗಳನ್ನು ಅನುಭವಿಸಿದೆ ಸುಲಭವಾಗಿ ದೇವರ ದರ್ಶನಕ್ಕಾಗಿ ತೆರಳಬಹುದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net