71,000ಕ್ಕೂ ಅಧಿಕ ಸಿಮ್​ ಕಾರ್ಡ್​ ಬ್ಲಾಕ್​! ಈ ತಪ್ಪುಗಳನ್ನು ಮಾಡದಿರಿ, ಬಳಕೆದಾರರಿಗೆ ಅಧಿಕಾರಿಗಳ ಎಚ್ಚರಿಕೆ | SIM Cards

ವಿಜಯವಾಣಿ - 2025-03-13T162630.615
Published on

SIM Cards: ಜನರ ಬಳಿ ಒಳ್ಳೆಯ ಆಕರ್ಷಕ ಸ್ಮಾರ್ಟ್​ಫೋನ್ ಅಥವಾ ಮೊಬೈಲ್ ಫೋನ್ ಇದ್ದರೆ ಸಾಲದು. ಅದರಲ್ಲಿ ಸಿಮ್​ ಇದ್ದರೆ ಮಾತ್ರ ದೂರವಾಣಿ ಕರೆ, ಸಂದೇಶಗಳು ಸಂಚರಿಸಲು ಸಾಧ್ಯ. ಇವೆಲ್ಲ ಇದ್ದರೆ ಮಾತ್ರವೇ ಆ ಸ್ಮಾರ್ಟ್​ಫೋನ್ ಅಥವಾ ಮೊಬೈಲ್​ ಫೋನ್​ಗೆ ಒಂದು ಬೆಲೆ. ಪ್ರತಿಯೊಬ್ಬ ಬಳಕೆದಾರನು ಕೂಡ ತಮ್ಮ ತಮ್ಮ ಹೆಸರಿನಲ್ಲೇ ಇಂತಹ ಸಿಮ್​ ಕಾರ್ಡ್​ಗಳನ್ನು ಪಡೆದಿರುತ್ತಾರೆ. ಜನಪ್ರಿಯ ನೆಟ್​ವರ್ಕ್​ ಕಂಪನಿಗಳ ಸಿಮ್ ಕಾರ್ಡ್​ಗಳನ್ನು ತಮ್ಮ ಮೂಲ ದಾಖಲೆಯಾದ ಆಧಾರ್​ ಕಾರ್ಡ್​ ಸೇರಿದಂತೆ ಇತರೆ ದಾಖಲೆಗಳನ್ನು ಒದಗಿಸುವ ಮೂಲಕ ಸಿಮ್ ಖರೀದಿಸಿರುತ್ತಾರೆ. ಆದರೆ, ಈ ನಮ್ಮ ಅರಿವಿಗೆ ಬಾರದಂತೆ ದುರಪಯೋಗ ಆದರೆ, ಅದೇ ನಮಗೆ ಶತ್ರುವಾಗಿಯೂ ಕಾಡಬಹುದು.

ಅಕ್ರಮ ಸಿಮ್ ಕಾರ್ಡ್ ಬ್ಲಾಕ್

ಇದೀಗ 70 ಸಾವಿರಕ್ಕೂ ಅಧಿಕ ಸಿಮ್​ ಕಾರ್ಡ್​ಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬ್ಲಾಕ್ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಮ್ ಕಾರ್ಡ್ ವಂಚನೆ ಗಮನಾರ್ಹವಾಗಿ ಹೆಚ್ಚಳವಾದ ಹಿನ್ನೆಲೆ ಅನೇಕ ಬಳಕೆದಾರರು ಇಂತಹ ಸಿಮ್ ಕಾರ್ಡ್ ವಂಚನೆಗೆ ಬಲಿಯಾಗುತ್ತಿದ್ದಾರೆ. ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂಬ ಸಂಗತಿಯೇ ಇಂದಿಗೂ ಅನೇಕರಿಗೆ ತಿಳಿದಿಲ್ಲ. ಇದು ದುರಂತವೇ ಸರಿ. ಹೆಚ್ಚಿನ ಸಿಮ್ ಕಾರ್ಡ್‌ಗಳನ್ನು ನಕಲಿ ಐಡಿಗಳೊಂದಿಗೆ ಖರೀದಿಸಲಾಗಿದೆ ಎಂದು ಡಿಒಟಿ ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಅಧಿಕಾರಿಗಳು ತಕ್ಷಣವೇ ಇಂತಹ ನಕಲಿ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸುತ್ತಿದ್ದಾರೆ. ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ, ದೂರಸಂಪರ್ಕ ಇಲಾಖೆ (ಡಿಒಟಿ) ಕಳೆದ 90 ದಿನಗಳಲ್ಲಿ 71,000ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಿದೆ. ಈ ಸಿಮ್ ಕಾರ್ಡ್‌ಗಳನ್ನು ಅಕ್ರಮವಾಗಿ ಪಡೆಯಲಾಗಿದೆ ಎಂದು ವರದಿಗಳು ಸೂಚಿಸಿವೆ. ವಂಚಕರು ಸಿಮ್ ಕಾರ್ಡ್‌ಗಳನ್ನು ನಕಲಿ ಗುರುತಿನೊಂದಿಗೆ ನೋಂದಾಯಿಸಿದ್ದಾರೆ. ಈ ಸೈಬರ್ ವಂಚಕರು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಏಜೆಂಟ್‌ಗಳನ್ನು ಬಳಸಿಕೊಂಡು ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಿದ್ದರು. ಈ ಕಾರ್ಡ್‌ಗಳನ್ನು ಪಡೆಯಲು ನಕಲಿ ಐಡಿ ಕಾರ್ಡ್‌ಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಮೋಸಕ್ಕೆ ತುತ್ತಾದವರು ಮುಂದೆ ಬರದಿದ್ದರೆ, ವಂಚಕರು ತಮ್ಮ ವಂಚನೆಯ ತಂತ್ರಗಳನ್ನು ಹೀಗೆಯೇ ಮುಂದುವರಿಸುತ್ತಾರೆ. ಅಂತಹ ವಂಚನೆಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತಿಮುಖ್ಯ ಎಂದು ಅಧಿಕಾರಿಗಳ ಹೇಳಿದ್ದಾರೆ.

ಸಿಮ್ ವಂಚನೆ ಟ್ರ್ಯಾಕ್ ಮಾಡೋದು ಹೇಗೆ?

ಡಾಟ್​ (DoT) ಅಧಿಕಾರಿಗಳು ಸಿಮ್ ವಂಚನೆಯನ್ನು ಟ್ರ್ಯಾಕ್ ಮಾಡಲು ಅಥವಾ ಪರಿಹರಿಸಲು ಬಳಸುವ ವಿವಿಧ ಸಾಧನಗಳನ್ನು ಉಲ್ಲೇಖಿಸಿದ್ದಾರೆ. ಅಂತಹ ಒಂದು ಸಾಧನ (ASTR). ಟೆಲಿಕಾಂ ಸಿಮ್ ಚಂದಾದಾರರ ಪರಿಶೀಲನೆಯು ಎಐ ಮತ್ತು ಮುಖ ಗುರುತಿನ ಆಧಾರಿತವಾಗಿದೆ. ಈ ವ್ಯವಸ್ಥೆಯು ಸಿಮ್ ಕಾರ್ಡ್ ಹೊಂದಿರುವವರ ದಾಖಲೆಗಳನ್ನು ಸಂಗ್ರಹಿಸುತ್ತದೆ. ಇದು ವಿಭಿನ್ನ ವಿಳಾಸಗಳು ಮತ್ತು ಹೆಸರುಗಳನ್ನು ಹೊಂದಿರುವ ವ್ಯಕ್ತಿಯಿಂದ ಪಡೆದ ಬಹು ಸಿಮ್ ಕಾರ್ಡ್‌ಗಳನ್ನು ಸುಲಭವಾಗಿ ಪತ್ತೆಹಚ್ಚುತ್ತದೆ. ಈ ತಂತ್ರಜ್ಞಾನದ ಸಹಾಯದಿಂದ ಅನೇಕ ನಕಲಿ ಸಿಮ್‌ಗಳ ಸಂಪರ್ಕ ಕಡಿತಗೊಳ್ಳುತ್ತವೆ.

ಸಿಮ್ ಕಾರ್ಡ್‌ ವರ್ಗಾಯಿಸಬೇಡಿ

ಬಳಕೆದಾರರು ತಮ್ಮ ಸಿಮ್ ಕಾರ್ಡ್‌ಗಳನ್ನು ತಮ್ಮ ಸ್ನೇಹಿತರು ಸೇರಿದಂತೆ ಇತರೆ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು. ತನ್ನ ಹೆಸರಿನಲ್ಲಿ ಸಿಮ್ ಪಡೆದ ವ್ಯಕ್ತಿಗೆ ಮಾತ್ರ ಅದರ ಬಳಕೆ ಮಾಡುವ ಜವಾಬ್ದಾರಿ ಇರುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸುವುದು ಅಪರಾಧ ಮತ್ತು ಅದಕ್ಕೆ ಯಾವುದೇ ಜಾಮೀನು ಇಲ್ಲ ಎಂದು ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net