

ನವದೆಹಲಿ: ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎನ್ನುತ್ತಾರೆ. ಇದಕ್ಕೆ ಅಸಂಖ್ಯ ನಿದರ್ಶನಗಳು ಇವೆ. ಅಂತೆಯೇ, ಮಧ್ಯಪ್ರದೇಶದಲ್ಲೂ ಇಂಥದ್ದೇ ಘಟನೆ ವರದಿಯಾಗಿದೆ.
ಓಂಕಾರ್ ಸಿಂಗ್ಗೆ 70 ವರ್ಷ ವಯಸ್ಸಾದರೆ, ವಧು ಗುಡ್ಡಿಬಾಯಿಗೆ 55 ವರ್ಷ. ಇವರಿಬ್ಬರ ಲವ್ ಶುರುವಾಗಿದ್ದು ಅಶೋಕ್ನಗರದ ಆಸ್ಪತ್ರೆಯಲ್ಲಿ. ಕೆಲಕಾಲ ಅಕ್ಕಪಕ್ಕದ ಬೆಡ್ಗಳಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಮೂರು ದಿನಗಳ ಮಾತುಕತೆ ಪ್ರೀತಿಗೆ ತಿರುಗಿ ಇನ್ನುಳಿದ ಸಮಯವನ್ನು ಜತೆಯಲ್ಲಿಯೆ ಕಳೆಯುವ ನಿರ್ಧಾರ ಮಾಡಿದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತಿದ್ದಂತೆ ಓಂಕಾರ್ ಸಿಂಗ್ ಆಕೆಯನ್ನು ತನ್ನ ಊರಾದ ಭೂರಾಖೇಡಿಗೆ ಕರೆದೊಯ್ದಿದ್ದಾನೆ. ತನ್ನ ನಾಲ್ಕು ಮಕ್ಕಳು ಹಾಗೂ 12 ಮೊಮ್ಮಕ್ಕಳಿಗೆ ಗುಡ್ಡಿಬಾಯಿ ಮೇಲೆ ಪ್ರೀತಿ ಉಂಟಾಗಿರುವ ವಿಚಾರ ತಿಳಿಸಿದ್ದಾನೆ. ಕುಟುಂಬದವರೆಲ್ಲ ಒಪ್ಪಿದ ಬಳಿಕ, ಗ್ರಾಮಸ್ಥರೆಲ್ಲರ ಎದುರು ಭರ್ಜರಿಯಾಗಿಯೇ ಮದುವೆಯಾಗಿದ್ದಾನೆ.
ಗುಡ್ಡಿಬಾಯಿ ಹರೆಯದ ವಧುವಂತೆ ಸಿಂಗರಿಸಿಕೊಂಡಿದ್ದರೆ, ಓಂಕಾರ್ ಸಿಂಗ್ ಮ್ಯಾಚಿಂಗ್ ಡ್ರೆಸ್ನಲ್ಲಿ ಕಂಗೊಳಿಸಿದ್ದ. ಗ್ರಾಮದ ತುಂಬೆಲ್ಲ ವಧು-ವರರ ಮೆರವಣಿಗೆಯೂ ಜೋರಾಗಿಯೇ ನಡೆದಿದೆ. ಬಂದವರೆಲ್ಲ ಖುಷಿಯಿಂದ ನೃತ್ಯ ಮಾಡಿ ಹಿರಿಯ ದಂಪತಿಗೆ ಶುಭ ಕೋರಿದ್ದಾರೆ.