

ನವದೆಹಲಿ: 70 ಲಕ್ಷಕ್ಕೂ ಹೆಚ್ಚು ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರ ಖಾಸಗಿ ದತ್ತಾಂಶ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಭಾರತೀಯ ಸೈಬರ್ ಭದ್ರತಾ ಸಂಶೋಧಕರೊಬ್ಬರು ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. ನಕಲಿ ಐಡೆಂಟಿಟಿ ತಯಾರಿಕೆ, ಆನ್ಲೈನ್ ವಂಚನೆ, ಫಿಶಿಂಗ್ ದಾಳಿ, ಸ್ಪಾಮ್ ಮತ್ತು ಇತರ ಸೈಬರ್ ಕ್ರಿಮಿನಲ್ ಚಟುವಟಿಕೆಗಳಿಗೆ ಇಂಥ ದತ್ತಾಂಶವನ್ನು ಬಳಸಬಹುದಾಗಿದೆ. 1.3 ಜಿಬಿ ಸಾಮರ್ಥ್ಯದ ಫೋಲ್ಡರ್ನಲ್ಲಿ ಬ್ಯಾಂಕ್ ಅಥವಾ ನಗರವಾರು ವಿಂಗಡಿಸಿರುವ 58 ಸ್ಪ್ರೆಡ್ಶೀಟ್ಗಳಿವೆ. ಪ್ರತಿಯೊಂದರಲ್ಲೂ ಸಾವಿರಾರು ಎಂಟ್ರಿಗಳು ಇವೆ. ಡೇಟಾಶೀಟ್ಗಳಲ್ಲಿ ಕ್ರೆಡಿಟ್ ಕಾರ್ಡ್ಗಳ ಪೂರ್ಣ ಸಂಖ್ಯೆ ಅಥವಾ ಬಳಕೆದಾರರನ್ನು ಗುರುತಿಸಲು ಸಾಧ್ಯವಾಗುವಂಥ ಯಾವುದೇ ವಿವರ ಇಲ್ಲ. ಅದರ ಬದಲು ಸ್ಪ್ರೆಡ್ಶೀಟ್ಗಳಲ್ಲಿ ಫೋನ್ ನಂಬರ್, ಯಾವ ಬಗೆಯ ಕ್ರೆಡಿಟ್ ಕಾರ್ಡ್, ವರಮಾನ ಸ್ಥಿತಿಗತಿ, ವಾರ್ಷಿಕ ಆದಾಯ, ಜನ್ಮ ದಿನಾಂಕ, ವಾಸಿಸುವ ನಗರ ಮುಂತಾದ ವಿವರ ಇದೆ.
ಮಾರಾಟಕ್ಕಿದೆ!: ಭಾರತದ ಪ್ರಮುಖ ದೊಡ್ಡ ನಗರಗಳ ಮಾಹಿತಿಗಳೂ ಅದರಲ್ಲಿವೆ. ಡಾರ್ಕ್ ವೆಬ್ನಲ್ಲಿ ಶೇರ್ ಮಾಡಲಾದ ಈ ಫೋಲ್ಡರ್ ಮಾರಾಟಕ್ಕೂ ಲಭ್ಯವಿದೆ. ಆದರೆ, ಪ್ರಸಕ್ತ ಸೈಬರ್ ಅಪರಾಧದ ವಾತಾವರಣದಲ್ಲಿ ಈ ಮಾಹಿತಿಗಳು ಸೈಬರ್ ದಾಳಿಕೋರರಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲಾರದು ಎನ್ನಲಾಗಿದೆ. ಈ ಬಗ್ಗೆ ಭಾರತದ ಸೈಬರ್ ತುರ್ತು ಸ್ಪಂದನೆ ತಂಡವಾದ ಸಿಇಆರ್ಟಿ-ಇನ್ಗೆ ಸೈಬರ್ ತಜ್ಞರು ಮಾಹಿತಿ ನೀಡಿದ್ದಾರೆ.