ಭಾರೀ ಪ್ರವಾಹಕ್ಕೆ ಕೊಳದಿಂದ ಹೊರಬಂದ 70 ಮೊಸಳೆಗಳು; ಸೆರೆ ಹಿಡಿಯಲು ಮುಂದಾದ ಚೀನಾ ಅಧಿಕಾರಿಗಳು!

Untitled design - 2023-09-12T200738.673
Published on

ಗುವಾಂಗ್‌ಡಾಂಗ್, ಚೀನಾ: ಕಳೆದ ದಿನಗಳಲ್ಲಿ ನಗರದ ಹಲವು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾದ ಪರಿಣಾಮ, 'ಕ್ರೋಕಡೈಲ್​ ಥೀಮ್ ಪಾರ್ಕ್'​ನಿಂದ ಸುಮಾರು 70 ಮೊಸಳೆಗಳು ತಪ್ಪಿಸಿಕೊಂಡಿದ್ದು, ಇವುಗಳ ಹುಡುಕಾಟಕ್ಕೆ ತಂಡವೊಂದನ್ನು ರಚಿಸಿದ ಚೀನಾ ಅಧಿಕಾರಿಗಳು, ಬಿಗಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಕಳೆದ ವಾರ ದಕ್ಷಿಣ ಚೀನಾದಲ್ಲಿ ಚಂಡಮಾರುತದಿಂದ ಉಂಟಾದ ನಿರಂತರ ಮಳೆಯು ಈ ಅವಾಂತರವನ್ನು ಸೃಷ್ಟಿಸಿದ್ದು, ಹಾಂಗ್ ಕಾಂಗ್ ಮತ್ತು ಇತರ ಪ್ರದೇಶಗಳಲ್ಲಿ ಪ್ರವಾಹವನ್ನು ಉಂಟುಮಾಡಿದೆ. ಗುವಾಂಗ್‌ಡಾಂಗ್ ಪ್ರಾಂತ್ಯದ ಮಾಮಿಂಗ್ ನಗರದ ಸುತ್ತಮುತ್ತಲು ಪ್ರವಾಹ ಪರಿಸ್ಥಿತಿ ಎದುರಾದ ಕಾರಣ, ವಾಣಿಜ್ಯ ಮೊಸಳೆ ಫಾರ್ಮ್‌ನ ಕೆರೆ ಕೂಡ ಉಕ್ಕಿ ಹರಿದಿದೆ. ಈ ವೇಳೆ ಕೊಳದಲ್ಲಿದ್ದ 70ಕ್ಕೂ ಹೆಚ್ಚು ಮೊಸಳೆಗಳು ತಪ್ಪಿಸಿಕೊಂಡಿವೆ ಎಂದು ಹೇಳಲಾಗಿದೆ.

ಪ್ರವಾಹದಲ್ಲಿ ತೇಲಿ ಬಂದಿರುವ ಮೊಸಳೆಗಳು ನಗರದ ಇತರ ಪ್ರದೇಶಗಳಲ್ಲಿ ಸಂಚರಿಸುತ್ತಿರಬಹುದು. ಇದರಿಂದ ಜನರಿಗೆ ತೊಂದರೆ ಉಂಟಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ರಕ್ಷಣಾ ಸಿಬ್ಬಂದಿಗಳು ಕೆಂಪು ಸಮವಸ್ತ್ರ ಧರಿಸಿ, ಪ್ರವಾಹದ ಸ್ಥಳಗಳಲ್ಲಿ ಕಾರ್ಯಚರಣೆಯನ್ನು ಆರಂಭಿಸಿದ್ದಾರೆ.

"ಮೊಸಳೆಗಳು ಇನ್ನೂ ನೀರಿನಲ್ಲಿವೆ ಮತ್ತು ಅವುಗಳನ್ನು ಹಿಡಿಯಲು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ" ಎಂದು ಚೀನಾ ನ್ಯಾಷನಲ್ ರೇಡಿಯೋ (CNR) ವರದಿ ಮಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net