2 ವರ್ಷದಲ್ಲಿ 7 ರೂಪಾಂತರಿ ಪ್ರಭೇದ ಕಂಡ ಭಾರತ: ಲಸಿಕೆ ಪ್ರತಿಭಟನೆಗೆ ಬೆದರಿ ಅಜ್ಞಾತ ಸ್ಥಳಕ್ಕೆ ಕೆನಡಾ ಪ್ರಧಾನಿ

15_01_2022-coronaindoremp a
Published on

ನವದೆಹಲಿ: ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕರೊನಾ ಮಹಾಮಾರಿಯ ಮೊದಲ ಪ್ರಕರಣ ಭಾರತದಲ್ಲಿ ಪತ್ತೆಯಾದ ಎರಡು ವರ್ಷಗಳಲ್ಲಿ ದೇಶದಲ್ಲಿ ವೈರಸ್​ನ ಏಳು ರೂಪಾಂತರಿಗಳು ಪತ್ತೆಯಾಗಿವೆ. ಸೋಂಕಿನ ಮೂಲ ವೈರಸ್ ವಿರುದ್ಧ ಹೋರಾಡುವುದರ ಜೊತೆಯಲ್ಲಿ ಪ್ರಭೇದಗಳ ವಿರುದ್ಧ ಸಮರ ನಡೆಸುವ ಸವಾಲೂ ದೇಶಕ್ಕೆ ಎದುರಾಗಿದೆ. ಇಷ್ಟಾಗಿಯೂ ಮುಂದೆ ಇನ್ನೂ ಏನಾಗಲಿದೆ ಎಂಬ ಬಗ್ಗೆ ಅನಿಶ್ಚಿತತೆಯೂ ಕಾಡುತ್ತಿದೆ.

ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದ ಕೇರಳದ ಕೇರಳದ ವಿದ್ಯಾರ್ಥಿನಿಗೆ ಕರೊನಾ ಸೋಂಕಿರುವುದು 2020 ಜನವರಿ 30ರಂದು ದೃಢಪಟ್ಟಿತ್ತು. ಅದುವೇ ಭಾರತದ ಮೊದಲ ಕೋವಿಡ್-19 ಪ್ರಕರಣವೆಂದು ದಾಖಲಾಗಿದೆ. 3ನೇ ವರ್ಷದ ವಿದ್ಯಾರ್ಥಿನಿಯಾಗಿದ್ದ ಆಕೆ ಸೆಮಿಸ್ಟರ್ ಪರೀಕ್ಷೆ ನಂತರ ಊರಿಗೆ ಮರಳಿದ್ದಾಗ ಪಾಸಿಟಿವ್ ಆಗಿರುವುದು ಗೊತ್ತಾಗಿತ್ತು. ಅದಾದ ಮೇಲೆ ದೇಶ ಕೋವಿಡ್ ಮಹಾಮಾರಿಯ ಮೂರು ಅಲೆಗಳನ್ನು ಎದುರಿಸಿದೆ. ಚೀನಾದ ವುಹಾನ್​ನಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಕರೊನಾ ಸೋಂಕು ಸ್ಪೋಟಿಸಿತ್ತು.

ವುಹಾನ್​ಗೆ ಮರಳುವ ಬಯಕೆ: ಭಾರತದ ಪ್ರಥಮ ಕರೊನಾ ಸೋಂಕಿತೆ, ಕೇರಳ ವಿದ್ಯಾರ್ಥಿನಿ ವೈದ್ಯಕೀಯ ಶಿಕ್ಷಣ ಮುಂದುವರಿಸುವ ಉದ್ದೇಶದಿಂದ ವುಹಾನ್​ಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕರೊನಾ ಈಗ ನಿರ್ವಹಿಸಬಹುದಾದ ವ್ಯಾಧಿಯಾಗಿದೆ. ಹಾಗಾಗಿ ತಮ್ಮ ಮಗಳು ವುಹಾನ್​ಗೆ ಹೋಗುವುದು ಉತ್ತಮ ಎಂದು ಆಕೆಯ ತಂದೆ ಹೇಳಿದ್ದಾರೆ.

ಭಾರತದಲ್ಲಿ ಕಂಡುಬಂದ ರೂಪಾಂತರಿಗಳು: ಆಲ್ಫಾ, ಬೀಟಾ, ಗಾಮಾ, ಡೆಲ್ಟಾ, ಬಿ.1.617.1 ಹಾಗೂ ಬಿ.1.617.3, ಏವೈ ಸರಣಿಗಳು, ಒಮಿಕ್ರಾನ್

ಪ್ರತಿಭಟನೆ, ರಹಸ್ಯ ಸ್ಥಳಕ್ಕೆ ಕೆನಡಾ ಪ್ರಧಾನಿ: ಕರೊನಾ ಲಸಿಕೆ ಕಡ್ಡಾಯ ಮತ್ತಿತರ ಕ್ರಮಗಳನ್ನು ಖಂಡಿಸಿ ಸಾವಿರಾರು ಜನರು ನಡೆಸುತ್ತಿರುವ ಪ್ರತಿಭಟನೆಗೆ ಬೆದರಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಹಾಗೂ ಅವರ ಕುಟುಂಬ ಸದಸ್ಯರು ರಾಜಧಾನಿ ತೊರೆದು ರಹಸ್ಯ ಸ್ಥಳವೊಂದಕ್ಕೆ ಧಾವಿಸಿದ್ದಾರೆ. ಪಾರ್ಲಿಮೆಂಟ್ ಹಿಲ್​ನಲ್ಲಿ ಅಸಂಖ್ಯಾತ ಟ್ರಕ್​ಗಳು ಮತ್ತು ಜನರು ನೆರೆಯುತ್ತಿದ್ದಂತೆ ಟ್ರೂಡೋ ಪಲಾಯನ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕೆಂಬ ನಿಯಮ ಹಾಗೂ ಇತರ ನಿಯಂತ್ರಣಗಳನ್ನು ವಾಪಸ್ ಪಡೆಯುವಂತೆ ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.

ದೇಶದ ಶೇಕಡ 75ರಷ್ಟು ವಯಸ್ಕರು ಎರಡೂ ಡೋಸ್ ಕರೊನಾ ಲಸಿಕೆ ಪಡೆದಿದ್ದಾರೆ. ಈ ಮಹಾನ್ ಸಾಧನೆಗಾಗಿ ನಮ್ಮ ನಾಗರಿಕರಿಗೆ ಅಭಿನಂದನೆಗಳು. ಲಸಿಕೆ ಅಭಿಯಾನ ಯಶಸ್ವಿಗೊಳಿಸುತ್ತಿರುವ ಎಲ್ಲರ ಬಗ್ಗೆ ಹೆಮ್ಮೆಯಿದೆ. | ನರೇಂದ್ರ ಮೋದಿ ಪ್ರಧಾನಿ

  • ಕೋಲ್ಕತದಲ್ಲಿ ಕರೊನಾ ರೋಗಿಗಳಲ್ಲಿ ಐಸಿಯು ಸೇರ್ಪಡೆ, ಉಸಿರಾಟಕ್ಕೆ ಸಂಬಂಧಿಸಿದ ಸಾಧನಗಳ ಅವಶ್ಯಕತೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
  • ಚೀನಾದ ಚಾವೋಯಾಂಗ್ ಜಿಲ್ಲೆಯ ಅನ್​ರೆೆನ್ಲಿ ಪ್ರದೇಶದಲ್ಲಿ ಕರೊನಾ ಸೋಂಕಿನ 12 ಪ್ರಕರಣ

ನಿಯೋಕೋವ್ ಮಾರಕವಲ್ಲ: ಹೊಸದಾಗಿ ಪತ್ತೆಯಾಗಿರುವ ಕರೊನಾ ವೈರಸ್​ನ ನಿಯೋಕೋವ್ ರೂಪಾಂತರಿಯು ಈಗಿರುವ ಸ್ವರೂಪದಲ್ಲಿ ಅಪಾಯಕಾರಿಯಲ್ಲ ಎಂದು ಉನ್ನತ ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದೊಂದು ಭಾರಿ ಅಪಾಯಕಾರಿ ತಳಿ ಎಂದು ಚೀನಾದ ಸಂಶೋಧಕರು ಕೆಲ ದಿನಗಳ ಹಿಂದೆ ವರ್ಣಿಸಿದ್ದರು. ಚೀನಿ ಪತ್ರಿಕೆಗಳಲ್ಲಿ ಪ್ರಕಟವಾದ ಈ ಕುರಿತ ವರದಿ ಜಗತ್ತಿನಲ್ಲಿ ಭಾರಿ ಕಳವಳ ಮೂಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net