

ಛತ್ತೀಸ್‌ಗಢ: ಶಾಲಾ ಮಕ್ಕಳ ಆಟೋ ರಿಕ್ಷಾಗೆ ಟ್ರಕ್ ಡಿಕ್ಕಿಯಾಗಿ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಕಂಕೇರ್ ಜಿಲ್ಲೆಯ ಕೋರೆರ್ ಚಿಲ್ಹತಿ ಚೌಕ್‌ನಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಐವರು ಸ್ಥಳದಲ್ಲೇ ಪ್ರಾಣಕಳೆದುಕೊಂಡಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪೊಲೀಸರು ತಿಳಿಸಿರುವ ಮಾಹಿತಿಯಂತೆ ಚಾಲಕ ತನ್ನ ಆಟೋ ರಿಕ್ಷಾದಲ್ಲಿ ಎಂಟು ಶಾಲಾ ಮಕ್ಕಳನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಆಟೋ ರಿಕ್ಷಾದ ಬಿಡಿ ಭಾಗಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಕೂಡಲೇ ಸ್ಥಳೀಯರು ಹಾಗೂ ದಾರಿಹೋಕರ ಸಹಾಯದಿಂದ ಬದುಕುಳಿದ್ದ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಒಂದು ಮಗು ಹಾಗೂ ಆಟೋ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಿರುವ ಟ್ರಕ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಕ್ಕಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಮಕ್ಕಳ ಕುಟುಂಬಗಳಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡಲು ಆರೋಗ್ಯ ಇಲಾಖೆಗೆ ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.