

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾಲೇಜಿನ ಸಹಪಾಠಿಗಳನ್ನು ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ೯೦ ಸಾವಿರ ರೂ. ಸುಲಿಗೆ ಮಾಡಿದ್ದ ೭ ಮಂದಿ ವಿದ್ಯಾರ್ಥಿಗಳನ್ನು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಉಪನಗರದ ಅನಂತಪುರ ನಿವಾಸಿಗಳಾದ ವಿವೇಕ್ (೨೦), ಅನಾಮಿತ್ರ (೨೦), ಯುವರಾಜ್ ರಾಥೋಡ್ (೨೦), ಹರಿರ್ತೋಜಿತ್ ಮುಖರ್ಜಿ (೨೦)ಪ್ರಜಿತ್ ಚತುರ್ವೇದಿ (೨೦), ಅಲೆನ್ ಮತ್ತು ಕರಣ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಏ.೧೮ ರಂದು ಕೃಷ್ಣ ಬಾಜಪೇಯಿ ಮತ್ತು ಯುವರಾಜ್ ಸಿಂಗ್ ಎಂಬುವರನ್ನು ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ, ಹಣ ಸುಲಿಗೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಕೃಷ್ಣ ಬಾಜಪೇಯಿ, ಯುವರಾಜ್ ಸಿಂಗ್ ರಾಜಾನುಕುಂಟೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಅದೇ ಕಾಲೇಜಿನಲ್ಲಿ ಆರೋಪಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಈ ಎರಡು ಗುಂಪುಗಳ ನಡುವೆ ಯಾವುದೋ ವಿಚಾರಕ್ಕೆ ಗಲಾಟೆಯಾಗಿತ್ತು. ಈ ವೇಳೆ ಆರೋಪಿ ಅನಾಮಿತ್ರನ ತಲೆಗೆ ಪೆಟ್ಟು ಬಿದ್ದಿತ್ತು. ಅದರಿಂದ ಆಕ್ರೋಶಗೊಂಡಿದ್ದ ಆರೋಪಿಗಳ ಗುಂಪು, ದೂರುದಾರ ಮತ್ತು ಆತನ ಸ್ನೇಹಿತರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು.
ಬಾಡಿಗೆ ಮನೆ ನೋಡಲು ಹೋದಾಗ ಲಾಕ್:
ಈ ಮಧ್ಯೆ ದೂರುದಾರದ ಕೃಷ್ಣ ಬಾಜಪೇಯಿ ಮತ್ತು ಯುವರಾಜ್ ಸಿಂಗ್ ನೋ ಬ್ರೋಕರ್ ಆ್ಯಪ್ ಮೂಲಕ ಅನಂತರಪುರದ ಕ್ಯಾಲಿರ್ಪೋಲಿಯ ರೆಸಾರ್ಟ್ ಬಳಿಯ ಕಟ್ಟಡದಲ್ಲಿರುವ ೨ನೇ ಮಹಡಿಯ ಬಾಡಿಗೆ ಮನೆ ನೋಡಲು ಹೋಗಿದ್ದಾರೆ. ಅದೇ ಕಟ್ಟಡದಲ್ಲಿ ಆರೋಪಿಗಳು ವಾಸವಾಗಿದ್ದರು. ಕೃಷ್ಣ ಬಾಜಪೇಯಿ ಮತ್ತು ಯುವರಾಜ್ ಸಿಂಗ್‌ರನ್ನು ಕಂಡ ಆರೋಪಿಗಳು, ಕೂಡಲೇ ಇಬ್ಬರನ್ನು ತಮ್ಮ ಕೋಣೆಗೆ ಕರೆದೊಯ್ದು ಮಧ್ಯಾಹ್ನ ೨.೩೦ ರಿಂದ ರಾತ್ರಿ ೮ ಗಂಟೆವರೆಗೂ ಕೂಡಿ ಹಾಕಿ ಕಬ್ಬಿಣದ ರಾಡ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ, ಸಿಗರೇಟ್‌ನಿಂದ ಸುಟ್ಟಿದ್ದಾರೆ. ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದು, ಬಾಡಿಗೆ ಮನೆಗೆ ಮುಂಗಡವಾಗಿ ಕೊಡಲು ತಂದಿದ್ದ ೪೦ ಸಾವಿರ ರೂ. ಅನ್ನು ಕೃಷ್ಣ ಬಾಜಪೇಯಿ ಜೇಬಿನಿಂದ ಕಸಿದುಕೊಂಡಿದ್ದಾರೆ. ಬಳಿಕ ಕೃಷ್ಣ ಬಾಜಪೇಯಿ ಸಹೋದರಿಯಿಂದ ೫೦ ಸಾವಿರ ರೂ. ಅನ್ನು ಆನ್‌ಲೈನ್ ವರ್ಗಾವಣೆ ಮಾಡಿಸಿಕೊಂಡು, ಅದನ್ನು ಸುಲಿಗೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕವಸ್ತು ಕೊಟ್ಟು ವಿಡಿಯೋ ಚಿತ್ರೀಕರಣ:
ದೂರುದಾರರ ಕೈಗೆ ಮಾದಕ ವಸ್ತುಗಳನ್ನು ಇಟ್ಟು, ಅದನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ವೈರಲ್ ಮಾಡದಿರಲು ಮತ್ತೆ ೪ ಲಕ್ಷ ರೂ. ಕೊಡಬೇಕು. ಈ ವಿಚಾರವನ್ನು ಹೊರಗಡೆ ಹೇಳಬಾರದು. ಒಂದು ವೇಳೆ ಬಹಿರಂಗ ಪಡಿಸಿದರೆ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ನಂತರ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆಯಲ್ಲಿ ಹಳೇ ದ್ವೇಷಕ್ಕೆ ಕೃತ್ಯ ನಡೆದಿದೆ ಎಂಬುದು ಗೊತ್ತಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.