

ನವದೆಹಲಿ: ಮದುವೆ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಖಾಲಿ ನಿವೇಶನದ ಗೋಡೆ ಇದ್ದಕ್ಕಿದ್ದಂತೆ ಕುಸಿದ ಪರಿಣಾಮ 7 ಮಂದಿ ಮೃತಪಟ್ಟಿದ್ದು 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ಪೂನಂ ಶರ್ಮಾ (42), ಮೀರಾ (36), ಪೂಜಾ (35), ಚಂದಾದೇವಿ (30), ಸುಶೀಲಾ (52), ಅನ್ವಿಯಾ (4) ಮತ್ತು ಮಾಧವ್ (8) ಎಂದು ಗುರುತಿಸಲಾಗಿದೆ.
ಉತ್ತರದಲ್ಲಿ ಮದುವೆ ಹಿಂದಿನ ದಿನ ಮಹಿಳೆಯರು ಹಲ್ದಿ ಶಾಸ್ತ್ರ ಮಾಡಿ, ಮೆರವಣಿಗೆ ಹೋಗುವುದು ವಾಡಿಕೆ. ಅದೇ ರೀತಿ ಉತ್ತರ ಪ್ರದೇಶದ ಮೌವಿನ ಘೋಸಿ ಕೊತ್ವಾಲಿ ಪ್ರದೇಶದ ಮಾದಾಪುರ -ಸಮಸ್ಪುರ ರಸ್ತೆಯ ಬಳಿ ಇಂತಹ ಮೆರವಣಿಗೆ ಗೋಡೆಯ ಬಳಿಯಿರುವ ಕುಟುಂಬದ ಮನೆಗೆ ಹೋಗುತ್ತಿದ್ದರು. ಅದೇ ಸಂದರ್ಭಕ್ಕೆ ಅಲ್ಲಿ ಗೋಡೆ ಕುಸಿತವಾಗಿದೆ.
ಘಟನೆಯಲ್ಲಿ 23 ಮಂದಿ ಮಣ್ಣಲ್ಲಿ ಹೂತುಹೋಗಿದ್ದರು. ಕಾರ್ಯಾಚರಣೆ ನಂತರ ಒಂದು ಮಗು, ನಾಲ್ವರು ಮಹಿಳೆಯರು ಸೇರಿ 7ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ 17 ಮಂದಿಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯ ಎರಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು ನಿರ್ದೇಶನ ನೀಡಿದ್ದಾರೆ.
ಮದುವೆ ಸಮಾರಂಭದ ಮುನ್ನ ಹಳದಿ ಸಮಾರಂಭದ ವೇಳೆ ಅನೇಕ ಮಹಿಳೆಯರು ಮತ್ತು ಮಕ್ಕಳು ಮಂಗಳಗೀತೆ ಹಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದಾಗ ನಿರ್ಮಾಣ ಹಂತದಲ್ಲಿರುವ ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದಿದೆ ಎಂದು ಜಿಲ್ಲಾಧಿಕಾರಿ ಅರುಣ್ ಕುಮಾರ್ ತಿಳಿಸಿದರು.