

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿಮಾಣ ಕಾರ್ಯ ಇನ್ನೊಂದು ಮಹತ್ವದ ಹಂತಕ್ಕೆ ಬಂದಿದ್ದು ಈ ವಾರ ಏಳು ಹೊಸ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಗೆ ರಂಗ ಸಜ್ಜುಗೊಂಡಿದೆ. ಪ್ರಾಣ ಪ್ರತಿಷ್ಠೆಯ ಮುಂದಿನ ಹಂತದ ಕಾರ್ಯಕ್ರಮಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಲ್ಲ ಸಿದ್ಧತೆಗಳನ್ನು ಆರಂಭಿಸಿದೆ. ಜೂನ್ 3ರಿಂದ ಆರಂಭವಾದ ಧಾರ್ವಿುಕ ಕಾರ್ಯಗಳು ಜೂ.5ರ ವರೆಗೆ ನಡೆಯಲಿವೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪ್ರಕಟಿಸಿದ್ದಾರೆ.
ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಾನ್ ಜತೆ ಶ್ರೀ ರಾಮ ವಿರಾಜಮಾನವಾಗಿರುವ ರಾಮ ದರ್ಬಾರ್ ಪ್ರತಿಮೆಯನ್ನು ಮಂದಿರದ ಮೊದಲ ಮಹಡಿಯಲ್ಲಿ ಗುರುವಾರ ಪ್ರತಿಷ್ಠಾಪಿಸಲಾಗುತ್ತದೆ. ಇದು ದೇವಸ್ಥಾನದ ಆಧ್ಯಾತ್ಮಿಕ ಹೃದಯವನ್ನು ಪ್ರತಿನಿಧಿಸುತ್ತದೆ. ಇದಲ್ಲದೆ, ಮಂದಿರದ ಆವರಣದ ಗಡಿಗಳಲ್ಲಿ ನಿರ್ವಿುಸಿರುವ ಆರು ಹೆಚ್ಚುವರಿ ದೇವಾಲಯಗಳಲ್ಲಿ ವಿವಿಧ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದರು.
ಮಸ್ಕ್ ತಂದೆ ಮಂತ್ರಮುಗ್ಧ
ದಿಗ್ಗಜ ತಂತ್ರಜ್ಞಾನೋದ್ಯಮಿ ಎಲಾನ್ ಮಸ್ಕ್ರ ತಂದೆ ಎರ್ರಾಲ್ ಮಸ್ಕ್ ಬುಧವಾರ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದರು. ಇದೊಂದು ಅದ್ಭುತ ಅನುಭವವೆಂದು ವರ್ಣಿಸಿರುವ ಮಸ್ಕ್, ತಾನು ಮಾಡಿದ ‘ಅತ್ಯುತ್ತಮ’ ಕೆಲಸಗಳಲ್ಲಿ ಈ ಭೇಟಿಯೂ ಒಂದಾಗಿದೆ ಎಂದು ಹೇಳಿದ್ದಾರೆ. ಈ ದೇವಸ್ಥಾನ ಜಗತ್ತಿನ ಅದ್ಭುತಗಳಲ್ಲಿ ಒಂದಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.