

Flights Cancelled: ಅಹಮದಾಬಾದ್ನ ಮೇಘನಿನಗರದಲ್ಲಿ ಜೂ.12ರಂದು ಜರುಗಿದ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ವಿಮಾನಯಾನ ಸಂಸ್ಥೆ ಒಂದರ ಮೇಲೊಂದರಂತೆ ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿದೆ.
ಹೌದು, ತಾಂತ್ರಿಕ ದೋಷ ಸೇರಿ ವಿವಿಧ ಕಾರಣಗಳಿಂದ ಮಂಗಳವಾರ ಏರ್ ಇಂಡಿಯಾದ 7 ವಿಮಾನಗಳು ರದ್ದಾಗಿವೆ. ರದ್ದಾದ ವಿಮಾನಗಳಲ್ಲಿ ಆರು ಬೋಯಿಂಗ್ 787-8 ಡ್ರೀಮ್‌ಲೈನರ್ ಆಗಿದ್ದು, ಇದೇ ತರಹದ ವಿಮಾನ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಯಿತು.
ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಮತ್ತು ದೆಹಲಿಯಿಂದ ಪ್ಯಾರಿಸ್ಗೆ ಪ್ರಯಾಣ ಬೆಳಸಬೇಕಿದ್ದ ಏರ್ ಇಂಡಿಯಾ ವಿಮಾನಗಳು ಏಕಾಏಕಿ ರದ್ದಾಗಿವೆ. ಬಳಿಕ ಲಂಡನ್ನಿಂದ ಅಮೃತಸರ ಹಾಗೂ ಬೆಂಗಳೂರಿನಿಂದ ಲಂಡನ್ಗೆ ತೆರಳಬೇಕಿದ್ದ ವಿಮಾನ ರದ್ದಾಗಿವೆ. ಅದೇ ರೀತಿ ಕಲ್ಕತ್ತಾ ಟು ಪ್ಯಾರಿಸ್ ಹೋಗಬೇಕಿದ್ದ ವಿಮಾನ ಇಂಜಿನ್ ವಿಫಲವಾದ ಕಾರಣದಿಂದ ರದ್ದಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 180 ಕೂಡ ಅದರ ಒಂದು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು. ವಿಮಾನ ಸಂಖ್ಯೆ AI 171 ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ನಂತರ, ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದಕ್ಕೆ ಕಾರಣ ಡಿಜಿಸಿಎ ಮಾರ್ಗಸೂಚಿಯಾಗಿದ್ದು, ಇದರಲ್ಲಿ ವಿಮಾನಗಳ ತಪಾಸಣೆಯನ್ನು 6 ವಿಭಿನ್ನ ಹಂತಗಳಲ್ಲಿ ಆದೇಶಿಸಿದೆ.
ಏರ್ ಇಂಡಿಯಾ ವಿಮಾನಗಳ ರದ್ದತಿ ಹೊಸದೇನಲ್ಲ ಮತ್ತು ಈ ಹಿಂದೆಯೂ ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ದೂರು ನೀಡಿದ್ದರು. ನವೆಂಬರ್ 25, 2024 ರಂದು ರಾಜ್ಯಸಭೆಯಲ್ಲಿ ಸರ್ಕಾರ ನೀಡಿದ ಉತ್ತರದಲ್ಲಿ, 2022 ರಿಂದ 2024 ರವರೆಗಿನ ವಿವಿಧ ವಿಮಾನಗಳ ರದ್ದತಿಯ ಡೇಟಾವನ್ನು ಒದಗಿಸಲಾಗಿದೆ.
ಇದರ ಪ್ರಕಾರ, '' 2022ರಲ್ಲಿ 87,191 ಏರ್ ಇಂಡಿಯಾ ವಿಮಾನಗಳಲ್ಲಿ 122 ವಿಮಾನಗಳು ತಾಂತ್ರಿಕ ದೋಷದಿಂದ ರದ್ದಾಗಿವೆ. ಅದೇ ರೀತಿ 2023ರಲ್ಲಿ 1,05,999 ವಿಮಾನಗಳಲ್ಲಿ 181 ತಾಂತ್ರಿಕ ದೋಷದಿಂದ ರದ್ದಾಗಿದ್ರೆ, 2024ರಲ್ಲಿ 1,10,351 ವಿಮಾನಗಳಲ್ಲಿ 107 ವಿಮಾಗಳು ರದ್ದಾಗಿವೆ''.
2024 ರ ಬಗ್ಗೆ ಹೇಳುವುದಾದರೆ, ಇಂಡಿಗೋದ 4,92,746 ವಿಮಾನಗಳಲ್ಲಿ 993, ಸ್ಪೈಸ್ ಜೆಟ್‌ನ 35,208 ವಿಮಾನಗಳಲ್ಲಿ 305, ಆಕಾಶ್ ಏರ್‌ನ 33,204 ವಿಮಾನಗಳಲ್ಲಿ 41 ವಿಮಾನಗಳು ತಾಂತ್ರಿಕ ದೋಷಗಳ ಕಾರದಿಂದ ರದ್ದಾಗಿವೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)